ಸ್ವಚ್ಚ ಪರಿಸರ ನಿರ್ಮಾಣ ಮಲೇರಿಯಾ ನಿಯಂತ್ರಣದಲ್ಲಿ ಯಶಸ್ವಿಗೆ ದಾರಿ- ಡಾ. ದೀಪಕ್ ರೈ
ಪುತ್ತೂರು: ದೇಶದಲ್ಲಿ ಸೊಳ್ಳೆಗಳ ಮೂಲಕ ಹರಡುವ ಹಲವು ರೋಗಗಳಿದ್ದು, ಈ ಪೈಕಿ ಮಲೇರಿಯಾ ರೋಗವೂ ಒಂದಾಗಿದೆ. ನಮ್ಮ ಸುತ್ತ ಮುತ್ತ ನೀರು ನಿಲ್ಲದಂತೆ ಮಾಡಿ ಸ್ವಚ್ಚ ಪರಿಸರ ನಿರ್ಮಾಣ ಮಾಡುವುದರಿಂದ ಮಲೇರಿಯಾ ನಿಯಂತ್ರಣದಲ್ಲಿ ನಾವು ಯಶಸ್ವು ಕಾಣಲು ಸಾಧ್ಯ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದರು.
ಅವರು ದ.ಕ.ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಪುತ್ತೂರು ಇದರ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ 2021ರ ಅಂಗವಾಗಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಕ್ರಮ’ದಲ್ಲಿ ಮಾಹಿತಿ ನೀಡಿದರು.
‘ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ’ ಎಂಬ ವಿಷಯದ ಬಗ್ಗೆ ಮಾತನಾಡಿದ ಡಾ. ದೀಪಕ್ ರೈ ಅವರು ಮಲೇರಿಯಾ ರೋಗದಲ್ಲಿ 4 ಬಗೆಗಳಿವೆ. ಈ ಪೈಕಿ ನಮ್ಮಲ್ಲಿ ವೈವಾಕ್ಸಿನ್ ಎಂಬ ಬಗೆಯು ಕಂಡು ಬರುತ್ತಿದೆ. ೧೫೦ ವರ್ಷಗಳ ಇತಿಹಾಸ ಹೊಂದಿರುವ ಮಲೇರಿಯಾ ರೋಗವು ಒಂದೊಮ್ಮೆ ದೇಶದಲ್ಲಿ ಸುಮಾರು 61 ಲಕ್ಷ ಮಂದಿಯನ್ನು ಭಾದಿಸಿದ್ದು, ಇದೀಗ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ ಎಂದರು.
ಮಲೇರಿಯಾ ಕಡಿಮೆಗೊಳಿಸುವುದಕ್ಕಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯೋನ್ಮುಖವಾಗಿದೆ. ರಾಜ್ಯದಲ್ಲಿ ನಮ್ಮ ದ.ಕ.ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 277 ಪ್ರಕರಣ ವರದಿಯಾಗಿದೆ. ಪುತ್ತೂರು ತಾಲೂಕಿನಲ್ಲಿ ಕಳೆದ ವರ್ಷ 13 ಪ್ರಕರಣ ವರದಿಯಾಗಿದ್ದು, ಈ ಬಾರಿ 2 ಪ್ರಕರಣಗಳು ಮಾತ್ರ ವರದಿಯಾಗಿದೆ. ಮಲೇರಿಯಾ ನಿಯಂತ್ರಣಕ್ಕಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ. ಪುತ್ತೂರಿನಲ್ಲಿ ಖಾಸಗಿ ಪ್ರಯೋಗಾಲಯಗಳಲ್ಲಿ ಪತ್ತೆಯಾಗುವ ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣದ ವರದಿ ಸರಿಯಾಗಿ ಇಲಾಖೆಗೆ ಸಿಗುತ್ತಿಲ್ಲ. ಈ ಬಗ್ಗೆ ಅವರಿಗೆ ಸೂಚನೆ ಕೊಟ್ಟರೂ ಅವರು ಸ್ಪಂಧಿಸುತ್ತಿಲ್ಲ. ಅದರಿಂದಾಗಿ ಸಮಗ್ರ ಅಂಕಿ ಆಂಶಗಳನ್ನು ಪಡೆದುಕೊಳ್ಳುವಲ್ಲಿ ತೊಡಕಾಗುತ್ತಿದೆ ಎಂದು ತಿಳಿಸಿದರು.
ಶೂನ್ಯ ಮಲೇರಿಯಾ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಎಲ್ಲರಲ್ಲಿ ಜಾಗೃತಿ ಅಗತ್ಯವಿದೆ. ಸೊಳ್ಳೆಗಳ ಉತ್ಪತ್ತಿ ಕಡಿಮೆ ಮಾಡುವುದರಿಂದ ಮಲೇರಿಯಾದ ಮೂಲ ನಾಶ ಮಾಡಲು ಸಾದ್ಯವಿದೆ. ಈ ಸೊಳ್ಳೆಗಳು ರಾತ್ರಿ ವೇಳೆಯಲ್ಲಿ ಕಚ್ಚುತ್ತವೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದಫಾಗಿಂಗ್ ಮಾಡಲಾಗುತ್ತಿದೆ ಮತ್ತು ರಾಸಾಯನಿಕ ಮಿಶ್ರಿತ ಸೊಳ್ಳೆ ಪರದೆಗಳನ್ನು ನೀಡಲಾಗುತ್ತಿದೆ. ಇದು ತುಂಬಾ ಪರಿಣಾಮಕಾರಿಯಾಗಿದೆ ಎಂದರು.
ಮಲೇರಿಯಾ ತಡೆಗಾಗಿ ಜನರು ಎಚ್ಚರ ವಹಿಸಬೇಕಾಗಿದೆ. ಸೊಳ್ಳೆಗಳ ಉತ್ಪಾಧನೆ ತಡೆಯುವ ಜೊತೆಗೆ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಹೊಗೆ ಹಾಕುವುದು. ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು, ನಿಂತ ನೀರುಗಳಿಗೆ ರಾಸಾಯನಿಕ ಸಿಂಪಡಿಸುವುದು ಮಾಡಬೇಕು. ಜ್ವರ ಕಾಣಿಸಿಕೊಂಡಾಗ ತಕ್ಷಣವೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದ ಅವರು ಮಲೇರಿಯಾ ರೋಗಿಗಳು ಸರಿಯಾದ ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ ಸಾವು ಸಂಭವಿಸುವ ಅಪಾಯವಿದೆ. ಮಲೇರಿಯಾ ಕಂಡು ಬಂದಲ್ಲಿ ರೋಗಿಗಳ ದೇಹದ ತೂಕಕ್ಕೆ ಅನುಗುಣವಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಕಿ ಪದ್ಮಾವತಿ ಉಪಸ್ಥಿತರಿದ್ದರು.