ಹುತಾತ್ಮರ ದಿನಾಚರಣೆ ಆಚರಿಸಿ ವಾಪಸ್ಸಾಗುತ್ತಿದ್ದಾಗ ಅಪಘಾತ: ರೈತ ಮುಖಂಡರಿಬ್ಬರು ಮೃತ್ಯು

ಹುತಾತ್ಮ ದಿನಾಚರಣೆಯ ಅಂಗವಾಗಿ ಐತಿಹಾಸಿಕ ನರಗುಂದ ಬಂಡಾಯದ ಹೋರಾಟ ಮುಗಿಸಿ ವಾಪಸ್ ಹಾಸನಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ಕಾರು ಅಪಘಾತದಲ್ಲಿ ಹಿರಿಯ ರೈತ ಮುಖಂಡರಾದ ಜಿ.ಟಿ ರಾಮಸ್ವಾಮಿ ಮತ್ತು ಚನ್ನಪಟ್ಟಣ ರಾಮಣ್ಣನವರು ನಿಧನರಾಗಿದ್ದಾರೆ. ಚಿಕ್ಕಮಗಳೂರು ಬಳಿ ಅಪಘಾತ ಸಂಭವಿಸಿದ್ದು ತಕ್ಷಣವೇ ಅವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.ಅವರೊಡನಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರವಿಕಿರಣ್ ಪುಣಚರವರಿಗೆ  ಗಾಯಗಳಾಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಗದಗ ಜಿಲ್ಲೆಯ ನರಗುಂದ ರೈತ ಹೋರಾಟ ಕಾರ್ಯಕ್ರಮ ಆಯೋಜಿಸುವಲ್ಲಿ ನಿರತರಾಗಿದ್ದ ಜಿ.ಟಿ ರಾಮಸ್ವಾಮಿ ಮತ್ತು ರಾಮಣ್ಣನವರು ನಿನ್ನೆ ಕಾರ್ಯಕ್ರಮ ಮುಗಿಸಿ ರಾತ್ರಿ 10ರ ವೇಳೆಗೆ ಅಲ್ಲಿಂದ ಹೊರಟಿದ್ದು, ಬೆಳಗ್ಗಿನ ಜಾವ 5 ಗಂಟೆಯ ಸಮಯದಲ್ಲಿ ಚಿಕ್ಕಮಗಳೂರು ಬಳಿ ಅಪಘಾತಕ್ಕೀಡಾಗಿದ್ದಾರೆ.  ಮೂಲತಃ ಕನಕಪುರದವರಾದ ಜಿ.ಟಿ ರಾಮಸ್ವಾಮಿಯವರು ಸೈನ್ಯದಲ್ಲಿ ಕೆಲ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ ಕೆಎಎಸ್‌ ಪಾಸು ಮಾಡಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದವರು. ಅದಕ್ಕೂ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ನಂತರ ಅಲ್ಲಿಂದ ಸಕ್ರಿಯ ರೈತ ಚಳವಳಿಯಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಅವರು ಹಾಸನ ಜಿಲ್ಲೆಯ ಆಲೂರಿನ ಬೆಳ್ಳವಾರದಲ್ಲಿ ತೋಟ ಮಾಡಿಕೊಂಡು ಕುಟುಂಬ ಸಮೇತ ವಾಸವಾಗಿದ್ದರು. ಚನ್ನಪಟ್ಟಣ ರಾಮು ಎಂದೇ ಖ್ಯಾತಿಯಾಗಿದ್ದ ರಾಮಣ್ಣನವರು ಹಲವು ದಶಕಗಳಿಂದ ರೈತ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.

Related Posts

Leave a Reply

Your email address will not be published.