ಬಹುಭಾಷಾ ಹಿರಿಯ ನಟಿ ಜಯಂತಿ ಇನ್ನಿಲ್ಲ

ಆರು ಭಾಷೆಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಇಂದು ನಿಧನರಾದರು . ‘ ಜೇನುಗೂಡು ‘ ಚಿತ್ರವು ಜಯಂತಿ ಅವರು ನಾಯಕಿ ನಟಿಯಾಗಿ ನಟಿಸಿದ ಮೊದಲ ಸಿನಿಮಾ. ನಾಲ್ಕು ಬಾರಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದ ಜಯಂತಿ ಅವರು 500 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು. 1945 ರ ಜನವರಿ 6 ರಂದು ಜನಿಸಿದ್ದ ಜಯಂತಿ ಅವರ ಮೂಲ ಹೆಸರು ಕಮಲ ಕುಮಾರಿ ಎಂಬುದಾಗಿತ್ತು . ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಅವರು ಇಂದು ಅವರ ಬೆಂಗಳೂರಿನ ಮನೆಯಲ್ಲಿ ನಿಧನರಾದರು. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರ ಜೊತೆಗೆ ಜಯಂತಿ ಅವರು 50 ಸಿನಿಮಾದಲ್ಲಿ ನಟಿಸಿದ್ದರು. ಕನ್ನಡ , ಹಿಂದಿ, ತೆಲುಗು, ಮಲಯಾಳಂ, ತಮಿಳು , ಮರಾಠಿ ಭಾಷೆಯ ಸಿನಿಮಾದಲ್ಲಿ ಜಯಂತಿ ಅವರು ನಟಿಸಿದ್ದರು. ಚೂರಿ ಚಿಕ್ಕಣ್ಣ , ಅಭಿನಯ ಶಾರದೆ , ಪರೋಪಕಾರಿ , ತುಂಬಿದ ಕೊಡ , ಮಮತೆಯ ಬಂಧನ , ಕಲ್ಲು ಸಕ್ಕರೆ , ಒಂದು ಹೆಣ್ಣಿನ ಕಥೆ, ಎರಡು ಮುಖ , ಚಂದವಳ್ಳಿಯ ತೋಟ , ಕಸ್ತೂರಿ ನಿವಾಸ, ನಕ್ಕರೆ ಅದೇ ಸ್ವರ್ಗ , ವಾತ್ಸಲ್ಯ, ಇಮ್ಮಡಿ ಪುಲಿಕೇಶಿ , ದೇವರ ಗೆದ್ದ ಮಾನವ , ಸಿಂಹಸ್ವಪ್ನ ಮೊದಲಾದವು ಜಯಂತಿ ಅವರ ನಟನೆಯ ಜನಪ್ರಿಯ ಚಿತ್ರಗಳು. ರಾಜಕೀಯ ರಂಗಕ್ಕೂ ಪ್ರವೇಶ ಮಾಡಿದ್ದ ಜಯಂತಿ ಅವರು ಜನತಾ ದಳದ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಸಜ್ಜನ ವ್ಯಕ್ತಿತ್ವದ ಮೂಲಕ ಸಿನಿಮಾದಲ್ಲಿ ಗೆದ್ದಿದ್ದ ಜಯಂತಿ ಅವರು ರಾಜಕೀಯದಲ್ಲಿ ಮಾತ್ರ ಸೋತಿದ್ದರು .

Related Posts

Leave a Reply

Your email address will not be published.