750 ಗ್ರಾಮಗಳ ದತ್ತು ಯೋಜನೆ – ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ ಅನುಷ್ಟಾನಕ್ಕೆ ಸರ್ಕಾರದ ಆದೇಶ – ಸಚಿವ ಡಾ. ನಾರಾಯಣಗೌಡ

ಬೆಂಗಳೂರು:ಸರ್ಕಾರ ಹತ್ತಾರು ಯೋಜನೆ ಘೋಷಣೆ ಮಾಡಿದರೂ ಅದು ಸಮರ್ಪಕವಾಗಿ ಜನರನ್ನು ತಲುಪುವುದು ಕಷ್ಟ. ಹೀಗಾಗಿ ಪ್ರತಿ ವ್ಯಕ್ತಿಗೂ ಯೋಜನೆಯ ಫಲ ಸಿಗಬೇಕು. ಬಡತನ ರೇಖೆಗಿಂತ ಕೆಳಗಿರುವ ಜನರ ಏಳಿಗೆ ಆಗಬೇಕು. ಇದಕ್ಕಾಗಿ ಸರ್ಕಾರದ ಯೋಜನೆ ಪ್ರತಿ ಮನೆ ಮನೆ ತಲುಪಲು `ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ಯನ್ನು ಸರ್ಕಾರ ಜಾರಿಗೆ ತಂದಿದ್ದು, ಯೋಜನೆ ಅನುಷ್ಟಾನಕ್ಕೆ ಅನುಮೋದನೆ ನೀಡಲಾಗಿದೆ. ಎನ್‍ಎಸ್‍ಎಸ್‍ನ ಸ್ವಯಂ ಸೇವಕರೇ ಇದರಲ್ಲಿ ಪ್ರಮುಖಪಾತ್ರ ವಹಿಸಲಿದ್ದಾರೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.

ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು `ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ ಘೋಷಿಸಿದ್ದಾರೆ. ಅದರಂತೆಯೆ ಯೋಜನೆಯ ಅನುಷ್ಟಾನಕ್ಕೆ ಅನುಮೋದನೆ ನೀಡಿ ಸರ್ಕಾರ ಆದೇಶಿಸಿದೆ. 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ. 17.3 ರಷ್ಟು (30ಲಕ್ಷ) ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಈ ಪೈಕಿ 750 ಹಳ್ಳಿಗಳಲ್ಲಿ ಸುಮಾರು 1,27,369 ಕುಟುಂಬಗಳು ಅತೀ ಬಡತನದಲ್ಲಿವೆ. ಅಂತಹ ಕುಟುಂಬಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ, ಬಡತನ ರೇಖೆಗಿಂತ ಮೇಲೆ ತರುವುದಕ್ಕಾಗಿಯೇ `ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ ತರಲಾಗಿದೆ.

ಈಗಾಗಲೆ ಗುರುತಿಸಲಾಗಿರುವ 750 ಗ್ರಾಮಗಳನ್ನು ಎನ್‍ಎಸ್‍ಎಸ್ ಘಟಕಗಳ ಮೂಲಕ ದತ್ತು ಸ್ವೀಕಾರ ಮಾಡಿ, `ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ಯಲ್ಲಿ ತೊಡಗಿಸಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿ ಈ ಕುಟುಂಬಗಳಿಗೆ ಅಗತ್ಯವಿರುವ ಯೋಜನೆಗಳನ್ನು ನೇರವಾಗಿ ತಲುಪಿಸುವ ಕಾರ್ಯ ಮಾಡಲಾಗುವುದು.

ಮಹಿಳಾ ಮತ್ತು ಮಕ್ಕಳ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಮತ್ತು ವಸತಿ ಇಲಾಖೆಗಳಲ್ಲಿನ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಿ ಬಡತನ ನಿರ್ಮೂಲನೆಗೆ ಪ್ರಯತ್ನಿಸಲಾಗುವುದು. ಎನ್‍ಎಸ್‍ಎಸ್ ಘಟಕಗಳ ಮೂಲಕ ಈ ಯೋಜನೆ ಜನರನ್ನು ತಲುಪಲಿದ್ದು, ಪ್ರತಿ ವರ್ಷ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲಿದೆ.

ಈಗಾಗಲೇ ಎನ್‍ಎಸ್‍ಎಸ್ ಮೂಲಕ ರಾಜ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿಮ್ಹಾನ್ಸ್ ಸಂಸ್ಥೆ ಮೂಲಕ 5 ಲಕ್ಷಕ್ಕೂ ಹೆಚ್ಚು ಯುವಕ ಯುವತಿಯರಿಗೆ ಕೌನ್ಸಿಲಿಂಗ್ ತರಬೇತಿ ನೀಡಲಾಗಿದ್ದು, ಅವರು ಕಾರಣಾಂತರಗಳಿಂದ ದಾರಿತಪ್ಪಿರುವ ಯುವಜನರನ್ನು ಗುರುತಿಸಿ ಕೌನ್ಸಿಲಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19 ಸಂದರ್ಭದಲ್ಲೂ ಕೊರೊನಾದಿಂದ ಬಳಲುತ್ತಿರುವವರಿಗೆ, ಕೊರೊನಾದಿಂದಲೇ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅದೇ ಎನ್‍ಎಸ್‍ಎಸ್ ತಂಡ ಈಗ `ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

Related Posts

Leave a Reply

Your email address will not be published.