ಉಡುಪಿ ಜಿಲ್ಲೆಯ ಶಿರ್ವದಲ್ಲಿ ಇಂಡಿಯನ್ ಆಯಿಲ್ ಫಿಲ್ಲಿಂಗ್ ಸ್ಟೇಷನ್ ಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.
ಜೂನ್ 27ರಂದು ರಾತ್ರಿ ಶಿರ್ವ ಸಮೀಪದ ಕುರ್ಕಾಲು ಗ್ರಾಮದ ಫಿಲ್ಲಿಂಗ್ ಸ್ಟೇಷನ್ಗೆ ಕಾರಿನಲ್ಲಿ ಬಂದ ಮೂವರು, ಸುಮಾರು 4711 ರೂ. ಮೌಲ್ಯದ ಡೀಸೆಲ್ ತುಂಬಿಸಿಕೊಂಡಿದ್ದರು. ಬಳಿಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಂತೆ ತೋರಿಸಿ, ಬಿಲ್ ನೀಡುವಂತೆ ಹೇಳಿ, ಹಣ ಪಾವತಿಸದೇ ಕಾರಿನಲ್ಲಿ ಪರಾರಿಯಾಗಿದ್ದರು.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಕಳ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ವಿಶೇಷ ತಂಡ ತನಿಖೆ ನಡೆಸಿತು.
ತನಿಖೆಯ ವೇಳೆ ಮೂವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದ್ದು, ಆರೋಪಿಗಳನ್ನು ಕೋಟೆಕಾರ್ನ ಮಹಮ್ಮದ್ ರಿಯಾಜ್(26), ಶಿರ್ವ ಭೂತಬೆಟ್ಟುವಿನ ಮಹಮ್ಮದ್ ಅಫ್ರಾಜ್(23), ಉಡುಪಿ ಅಂಬಾಗಿಲಿನ ಆಶಿಲ್(21) ಎಂದು ಗುರುತಿಸಲಾಗಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಇದೇ ರೀತಿಯ ವಂಚನೆ ಕೃತ್ಯಗಳನ್ನು ಬೇರೆಡೆ ನಡೆಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


