HomeFresh Newsಸಾಹಿತಿ ಪುಷ್ಪ ಪ್ರಸಾದ್ ಅವರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ಸಾಹಿತಿ ಪುಷ್ಪ ಪ್ರಸಾದ್ ಅವರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ಉಡುಪಿ, ಜು. 23: ಉಡುಪಿಯ ಖ್ಯಾತ ಸಾಹಿತಿ ಶ್ರೀಮತಿ ಪುಷ್ಪ ಪ್ರಸಾದ್ ಅವರು ಪ್ರತಿಷ್ಠಿತ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿದೆ.

ಮೂಲತಃ ಮಡಿಕೇರಿಯವರಾದ ಪುಷ್ಪ ಪ್ರಸಾದ್ ಅವರು ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸ್ತುತ ಉಡುಪಿಯ ನ್ಯಾಯಾಲಯ ಇಲಾಖೆಯಲ್ಲಿ ಶೀಘ್ರಲಿಪಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಸೇವೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿರುವ ಅವರು, ಹಲವಾರು ಸಾಹಿತ್ಯ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಅವರು ಉಡುಪಿ ಜಿಲ್ಲಾ ಬರಹಗಾರರ ಸಂಘದ ಜಿಲ್ಲಾಧ್ಯಕ್ಷೆ, ಆಮಂತ್ರಣ ಉಡುಪಿ ಜಿಲ್ಲಾಧ್ಯಕ್ಷೆ ಹಾಗೂ ಉಡುಪಿ ಜಿಲ್ಲಾ ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರ ಸಾಹಿತ್ಯ ಕೃತಿಗಳಲ್ಲಿ ‘ಒಸಗೆಯ ಎಸಳು’, ‘ಭಾವ ನೈವೇದ್ಯ’, ‘ಹೆಜ್ಜೆ ತಾಳದ ಗೆಜ್ಜೆ ಘಲಿರು’, ‘ನಕ್ಷತ್ರ ಪುಂಜ’, ‘ಪುಟಾಣಿ ಸ್ವರ್ಗ’, ‘ಸೃಷ್ಟಿಯ ತೋರಣ’, ‘ಗುಡಿಗಾರ’, ‘ದಿವ್ಯಾಕ್ಷರಿ’ ಹಾಗೂ ‘ಸುಖ ಧರೆ’ ಪ್ರಮುಖವಾಗಿದ್ದು, ಕವನ, ಲೇಖನ, ನೀತಿಕಥೆ ಹಾಗೂ ನ್ಯಾನೋ ಕಥೆಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಬರಹಗಳು ಅನೇಕ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಇದಲ್ಲದೆ, ಅವರು ಪ್ರತಿಲಿಪಿ ವೇದಿಕೆಯ ಸಕ್ರಿಯ ಸಾಹಿತಿಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ, ಪುರಸ್ಕಾರಗಳು ಮತ್ತು ಗೌರವಗಳಿಗೆ ಭಾಜನರಾಗಿದ್ದಾರೆ. ಫೇಸ್‌ಬುಕ್ ಮೂಲಕ ನಡೆಯುವ ಇಂಟರ್‌ನ್ಯಾಷನಲ್ ವುಮೆನ್ ಐಕಾನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ‘ಯಕ್ಷಲೋಕ’ ಕವನವು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿರುವುದು ವಿಶೇಷ.

ಹಲವಾರು ಸಾಹಿತ್ಯ ಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿ, ಉಪನ್ಯಾಸಕಿ ಹಾಗೂ ನಿರೂಪಕಿಯಾಗಿ ಸೇವೆ ಸಲ್ಲಿಸಿರುವ ಪುಷ್ಪ ಪ್ರಸಾದ್ ಅವರಿಗೆ ದೊರೆತಿರುವ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಉಡುಪಿ ಜಿಲ್ಲೆಯ ಸಾಹಿತ್ಯ ವಲಯಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments