ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಥೆರಪಿ ಮುಗಿದ ನಂತರದ (ಆಫ್ಟರ್ ಕಂಪ್ಲೀಷನ್ ಥೆರಪಿ – ACT) ಕ್ಲಿನಿಕ್ ಪ್ರಾರಂಭ
ಉಡುಪಿ : ಭಾರತದಲ್ಲಿ ವಾರ್ಷಿಕವಾಗಿ, ಕ್ಯಾನ್ಸರ್ ಹೊಂದಿರುವ 78,000 ಮಕ್ಕಳಲ್ಲಿ 80% ಕ್ಕಿಂತ ಹೆಚ್ಚು ಮಕ್ಕಳು ಪೂರ್ಣ ಗುಣಮುಖವಾಗುವ ಅವಕಾಶವನ್ನು ಹೊಂದಿದ್ದಾರೆ. ಕ್ಯಾನ್ಸರ್ ನಿಂದ ಬದುಕುಳಿದವರು ಚಿಕಿತ್ಸೆಯ ತಡ ಪರಿಣಾಮಗಳು ಮತ್ತು ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುವುದರಿಂದ, ಕ್ಯಾನ್ಸರ್ ಚಿಕಿತ್ಸೆಯಿಂದ ಬದುಕುಳಿದವರಿಗೆ ವಿಶೇಷ ಚಿಕಿತ್ಸಾಲಯವನ್ನು ಹೊಂದಿರುವುದು ಮುಖ್ಯವಾಗಿದೆ.
ಇದರ ಸಲುವಾಗಿ ಕ್ಯಾನ್ಸರ್ ಬದುಕುಳಿದವರಿಗೆ ಸಮಗ್ರ ಆರೈಕೆ ಮತ್ತು ಸಮಗ್ರ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು, ಥೆರಪಿ ಮುಗಿದ ನಂತರದ (ಆಫ್ಟರ್ ಕಂಪ್ಲೀಷನ್ ಥೆರಪಿ-ACT ) ಕ್ಲಿನಿಕ್ ಅನ್ನು ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲದಲ್ಲಿ ಎನ್‌ಜಿಒ ಸಂಸ್ಥೆ – ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮುಂಬೈ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ.
ಈ ಕ್ಲಿನಿಕ್ ನ ಉದ್ಘಾಟನಾ ಕಾರ್ಯಕ್ರಮದ ಅತಿಥಿಯಾಗಿದ್ದ ವೈದ್ಯಕೀಯ ವ್ಯವಹಾರ, ಭಾರತೀಯ ಕ್ಯಾನ್ಸರ್ ಸೊಸೈಟಿ ಮುಂಬೈ ನ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ. ವಂದನಾ ಧಮಾನ್ಕರ್ ಕ್ಲಿನಿಕ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಭಾರತೀಯ ಕ್ಯಾನ್ಸರ್ ಸೊಸೈಟಿ, ಮುಂಬೈ ಕ್ಯಾನ್ಸರ್ ಚಿಕಿತ್ಸೆಯಿಂದ ಬದುಕುಳಿದವರ ಯೋಗಕ್ಷೇಮ ನೋಡಿಕೊಳ್ಳಲು ಪ್ರತ್ಯೇಕ ವಿಭಾಗವನ್ನು ಹೊಂದಿದ್ದು ತಡವಾದ ಪರಿಣಾಮಗಳಿಗೆ ಚಿಕಿತ್ಸಾ ನಿಧಿಗಳನ್ನು ಒದಗಿಸುತ್ತಿದೆ. ಇಂತಹ ವಿಶೇಷ ಚಿಕಿತ್ಸಾಲಯಗಳು ಭಾರತದಲ್ಲಿ ಕೆಲವೇ ಕೇಂದ್ರಗಳಲ್ಲಿ ಅಸ್ತಿತ್ವದಲ್ಲಿವೆ ಮತ್ತು ಇದು ಬಾಲ್ಯದ ಕ್ಯಾನ್ಸರ್ ರೋಗಿಗಳಿಗೆ ಸಮಗ್ರ ಆರೈಕೆಯನ್ನು ಪೂರ್ಣಗೊಳಿಸುತ್ತದೆ, ಎಂದರು.
ವಿಭಾಗದ ಸಹಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಅತಿಥಿಗಳನ್ನು ಸ್ವಾಗತಿಸಿ ಮಾತಾನಾಡುತ್ತಾ, ಬಾಲ್ಯದ ಕ್ಯಾನ್ಸರ್ ಪೀಡಿತರು ನಮ್ಮ ದೇಶದ ಭವಿಷ್ಯದ ಪ್ರಜೆಗಳಾಗಿದ್ದು, ಅವರು ಸಾಮಾನ್ಯ, ಆರೋಗ್ಯಕರ ಮತ್ತು ಫಲದಾಯಕ ಜೀವನ ನಡೆಸುವುದು ಮುಖ್ಯ ಎಂದು ಒತ್ತಿ ಹೇಳಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಮಿನ್ ರಹಿಮಾನ್ ಮತ್ತು ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಮೃತವರ್ಷಿಣಿ ಅವರು ಇಂತಹ ವಿಶೇಷ ಚಿಕಿತ್ಸಾಲಯಗಳ ಅಗತ್ಯತೆಯ ಕುರಿತು ಸ್ಥೂಲ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅರ್ಚನಾ ಎಂ. ವಿ ಕಾರ್ಯಕ್ರಮ ನಿರೂಪಿಸಿದರು ಮತ್ತು ವಿಭಾಗದ ಸ್ಥಾನಿಕ ವೈದ್ಯೆ ಡಾ. ಸ್ವಾತಿ ಪಿ.ಎಂ ವಂದಿಸಿದರು.