ಬಂಟ್ವಾಳ: ಮಗಳನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ದುರಸ್ತಿಗಾಗಿ ನಿಲ್ಲಿಸಿದ್ದ ಕ್ರೇನ್ಗೆ ಹಿ೦ಬದಿಯಿ೦ದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೆಕ್ಯಾನಿಕ್ಗಳು ಸೇರಿದಂತೆ ಮೂವರು ಗಾಯಗೊಂಡ ಘಟನೆ ಬಿ.ಸಿ.ರೋಡು-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಳ್ಳಿಮಾರ್ನಲ್ಲಿ ಶನಿವಾರ ನಡೆದಿದೆ.
ಪುಂಜಾಲಕಟ್ಟೆ ನಿವಾಸಿ ಯು. ಮಹಮ್ಮದ್ ಅವರು ಮಗಳನ್ನು ಕಾರಿನಲ್ಲಿ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಕಳ್ಳಿಮಾರ್ನ ಸುವರ್ಣ ಇಂಜಿನಿಯರಿಂಗ್ ಶಾಪ್ ಮುಂಭಾಗ ಈ ಅಪಘಾತ ಸಂಭವಿಸಿದೆ.

ಈ ಸಂದರ್ಭ ರಸ್ತೆ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಿ ಅದರ ಮಾಲಕ ತೆರಳಿದ್ದರು. ಸಮೀಪದಲ್ಲೇ ಕ್ರೇನ್ವೊಂದನ್ನು ದುರಸ್ತಿಗಾಗಿ ನಿಲ್ಲಿಸಲಾಗಿತ್ತು. ಅಯ್ಯಪ್ಪ ಮಾಲಾಧಾರಿ ಮಾಧವ ಪಿಟ್ಟಿರ್ ಅವರು ಕ್ರೇನ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರೆ, ಪುನೀತ್ ಸಜೀಪ ಅವರು ಬೆಕ್ನಲಿ ಕುಳಿತು ಅವರೊಂದಿಗೆ ಮಾತನಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಅತಿ ವೇಗದಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಕಾರು ಮೊದಲು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಕ್ರೇನ್ಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಸುಮಾರು 100 ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನಿಂತಿದೆ. ಅದೃಷ್ಟವಶಾತ್ ಆ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಮತ್ತೊಂದು ಅನಾಹುತ ತಪ್ಪಿದಂತಾಗಿದೆ.
ಡಿಕ್ಕಿಯ ತೀವ್ರತೆಗೆ ಕ್ರೇನ್ ದುರಸ್ತಿ ಮಾಡುತ್ತಿದ್ದ ಮಾಧವ ಪಿಟ್ಟಿರ್ ಹಾಗೂ ಬೈಕ್ನಲ್ಲಿದ್ದ ಪುನೀತ್ ಸಜೀಪ ಅವರು ವಾಹನಗಳ ನಡುವೆ ಸಿಲುಕಿಕೊಂಡಿದ್ದು ಇಬ್ಬರಿಗೂ ಗಂಭೀರ ಗಾಯವಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹರಸಾಹಸಪಟ್ಟು ಇಬ್ಬರನ್ನೂ ಹೊರತೆಗೆದಿದ್ದಾರೆ. ಕಾರು ಚಾಲಕ ಯು. ಮಹಮ್ಮದ್ ಅವರಿಗೂ ಗಾಯಗಳಾಗಿವೆ ಎ೦ದು ತಿಳಿದುಬಂದಿದೆ.ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರು ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲುಅಗತ್ಯ ವ್ಯವಸ್ಥೆ ಕಲ್ಪಿಸುವ ಮೂಲಕ ನೆರವಾದರು.ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

