ನೇತ್ರಾವತಿ ನದಿ ತೀರದಲ್ಲಿ ಶಂಕಿತ ಉಗ್ರರ ಮಹಜರು : ಪೊಲೀಸರಿಂದ ಪರಿಶೀಲನೆ
ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಶಂಕೆಯಲ್ಲಿ ಬಂಧಿತ ಆರೋಪಿ ಮಂಗಳೂರಿನ ಮಾಝ್ ಮುನೀರ್ ಅಹ್ಮದ್ ಶಿವಮೊಗ್ಗ ಪೊಲೀಸರು ಬಂಟ್ವಾಳದ ನಾವೂರು ಸಮೀಪ ಹಲವೆಡೆ ಮಹಜರು ನಡೆಸಿದರು. ನೇತ್ರಾವತಿ ನದಿ ಕಿನಾರೆಯಲ್ಲಿ ಹಾಗೂ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಲ್ಲಿ ಈತ ಸ್ಫೋಟಕಗಳನ್ನು ಬಚ್ಚಿಟ್ಟಿರುವ ಶಂಕೆಯಿಂದ ಈ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ. ಮಂಗಳೂರಿನಿಂದ ಈತನನ್ನು ಬಂಟ್ವಾಳಕ್ಕೆ ಕರೆತಂದ ಪೊಲೀಸರು ರಾತ್ರಿವರೆಗೂ ಪರಿಶೀಲನೆ ನಡೆಸಿದರು.ಶಂಕಿತ ಉಗ್ರ ನಿರ್ಜನ ಪ್ರದೇಶದಲ್ಲಿ ಸ್ಫೋಟದ ರಿಹರ್ಸಲ್ ನಡೆಸುತ್ತಿರುವ ಶಂಕೆ ಇದ್ದ ಕಾರಣ ಶ್ವಾನದಳ ಮತ್ತು ಸ್ಫೋಟಕ ಪತ್ತೆ ತಜ್ಞರೊಂದಿಗೆ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದ್ದು, ಸ್ಥಳೀಯ ಪೊಲೀಸರು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದರು.ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್‍ಐ ಶಿವಕುಮಾರ್ ನೇತೃತ್ವದ ತಂಡ ಈ ಪರಿಶೀಲನೆ ನಡೆದಿದೆ. ನಾವೂರು ಗ್ರಾಮದ ಸುಲ್ತಾನ್ ಕಟ್ಟೆ, ಅಗ್ರಹಾರ ಪರಿಸರದಲ್ಲಿ ಹಾಗೂ ನದಿ ಬದಿಯ ಕೆಲವು ನಿರ್ದಿಷ್ಟ ಜಾಗಗಳಲ್ಲಿ ಈ ಪರಿಶೀಲನೆಯನ್ನು ನಡೆಸಲಾಗಿದೆ.