ತಾತ್ಕಾಲಿಕವಾಗಿ 500 ಕೋಟಿ ರೂ. ತಕ್ಷಣ ಬಿಡುಗಡೆ : ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಭಾರೀ ಮಳೆಗೆ ಹಾಳಾಗಿರುವ ಮೂಲಭೂತ ಸೌಕರ್ಯಗಳನ್ನು ಮರು ಸ್ಥಾಪಿಸಲು ತಾತ್ಕಾಲಿಕವಾಗಿ 500 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆಗಿರುವ ಮಳೆಹಾನಿಯ ಬಗ್ಗೆ ಮಣಿಪಾಲದ ಜಿ.ಪಂ ಸಭಾಂಗಣದಲ್ಲಿ ಇಂದು ನಡೆಸಿದ ಸಮಗ್ರ ಸಮೀಕ್ಷಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಳೆಹಾನಿಯ ಬಗ್ಗೆ ವರದಿ ತರಿಸಿ ಸಮಗ್ರ ಮಾಹಿತಿ ಸಂಗ್ರಹಿಸಿದ ಬಳಿಕ ಎನ್‍ಡಿಆರ್‍ಎಫ್‍ನಡಿ ಪರಿಹಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡುವುದಾಗಿ ಸಿಎಂ ತಿಳಿಸಿದರು.
ಇಂದಿನ ಸಭೆಯಲ್ಲಿ ಕರಾವಳಿ ಮೂರು ಜಿಲ್ಲೆಗಳ ಪ್ರವಾಹ ಸ್ಥಿತಿಗತಿ ಕುರಿತ ಎರಡು ಗಂಟೆಗಳ ಕಾಲ ಸಭೆ ಚರ್ಚೆ ನಡೆಸಿತು ಎಂದರು.ಜುಲೈ ತಿಂಗಳಲ್ಲಿ ಕರಾವಳಿಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಇಡೀ ರಾಜ್ಯದಲ್ಲಿ ಇದುವರೆಗೆ 32 ಜೀವ ಹಾನಿಯಾಗಿದೆ. ಐವರು ಕಣ್ಮರೆಯಾಗಿದ್ದಾರೆ. 34 ಮಂದಿ ಗಾಯಾಳುವಾಗಿದ್ದು, 300 ಮಂದಿಯನ್ನು 14 ಕಾಳಜಿ ಕೇಂದ್ರಗಳಲ್ಲಿ ರಕ್ಷಿಸಲಾಗಿದೆ ಎಂದು ವಿವರಿಸಿದರು.ರಾಜ್ಯದಲ್ಲಿ ನಾಲ್ಕು ಎನ್‍ಡಿಆರ್‍ಎಫ್ ತಂಡ ಹಾಗೂ ನಾಲ್ಕು ಎಸ್‍ಡಿಆರ್‍ಎಫ್ ತಂಡಗಳು ಕೆಲಸ ಮಾಡುತ್ತಿವೆ ಎಂದು ಸಿಎಂ ತಿಳಿಸಿದರು.