ಬೆಳಪು : ಸಾವಿನಲ್ಲೂ ಒಂದಾದ ದಂಪತಿ

ಮದುವೆಯಾಗಿ ಐದು ದಶಕಗಳ ಕಾಲ ಜೊತೆಯಾಗಿ ಬಾಳಿ ಸಿಹಿ ಕಹಿ, ನೋವು ನಲಿವು ಸವಾಲುಗಳನ್ನು ಎದುರಿಸಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕಾಪುವಿನ ಬೆಳಪುವಿನಲ್ಲಿ ನಡೆದಿದೆ.

ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡ್ಕೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಒಂದಾದ ದಂಪತಿ.ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಅವರು ವಯೋ ಸಹಜ ಕಾರಣಗಳಿಂದಾಗಿ ಮಂಗಳವಾರ ಮುಂಜಾನೆ ಮೃತಪಟ್ಟಿದ್ದು ಮಕ್ಕಳು ಮುಂಬಯಿ ಸಹಿತ ಬೇರೆ ಕಡೆಗಳಲ್ಲಿ ಇರುವುದರಿಂದ ಅವರ ಶವವನ್ನು ಕುಟುಂಬದ ಮೂಲ ಮನೆಯಲ್ಲಿ ಶೈತ್ಯೀಕರಣದ ವ್ಯವಸ್ಥೆಯೊಂದಿಗೆ ಮನೆಯಲ್ಲೇ ಇರಿಸಲಾಗಿತ್ತು. ಬುಧವಾರ ಮುಂಜಾನೆ ಮಕ್ಕಳು ಮನೆಗೆ ಬರುತ್ತಲೇ ಅವರ ಮೃತದೇಹವನ್ನು ತಮ್ಮ ಸ್ವಂತ ಮನೆಗೆ ತರಲಾಗಿತ್ತು. ಮೃತದೇಹವನ್ನು ಮನೆಯೊಳಗೆ ತಂದು ನೆಲಕ್ಕೆ ಇಟ್ಟ ಕೆಲವೇ ಕ್ಷಣದಲ್ಲಿ ಪತ್ನಿ ರೇವತಿ ಶೆಟ್ಟಿ ಅವರು ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.

ದಂಪತಿಯ ಮೃತದೇಹವನ್ನು ಮಕ್ಕಳು ಮತ್ತು ಕುಟುಂಬಸ್ಥರು ಜೊತೆ ಸೇರಿ ಬೆಳಪು ಧೂಮಪ್ಪ ಶೆಟ್ಟಿ ಮನೆ ಬಳಿಯ ಜಮೀನಿನಲ್ಲಿ ಸಿದ್ಧಪಡಿಸಿದ ಚಿತೆಯಲ್ಲಿ ಜೋಡಿಯಾಗಿಯೇ ಅಂತ್ಯಕ್ರಿಯೆ ನಡೆಸಲಾಯಿತು.

Related Posts

Leave a Reply

Your email address will not be published.