ಬೆಳ್ತಂಗಡಿ: ಹಲ್ಲೆ ತಡೆಯಲು ಮುಂದಾದ ವ್ಯಕ್ತಿಯೇ ಸಾವು

ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು, ಈ ವೇಳೆ ಜಗಳ ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಬೆಳ್ತಂಗಡಿಯ ಪರಾರಿ ಶಾಂತಿನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ್ (55) ಅವರು ಯುವಕರ ತಂಡದಿಂದ ಹಲ್ಲೆಗೊಳಗಾಗಿ ಮೃತಪಟ್ಟವರು. ಜಾರಪ್ಪ ನಾಯ್ಕ್ ಅವರ ಸಹೋದರ ನಾರಾಯಣ ನಾಯ್ಕ್ (47) ಎಂಬವರು ಸ್ಥಳೀಯ ಆರು ವರ್ಷದ ಬಾಲಕಿಗೆ ಕಳೆದ 10 ದಿನಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಅದಾಗಲೆ ರಾಜಿ ಸಂದಾನ ನಡೆದಿತ್ತು. ಆದರೆ ಶುಕ್ರವಾರ ಸಂಜೆ ವೇಳೆ ಮತ್ತೆ ಬಾಲಕಿಯನ್ನು ಕರೆದು ಮಾತಾಡಿಸಿದ್ದರು ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ನಾರಾಯಾಣ ನಾಯ್ಕ್ ನನ್ನು ಯುವಕರ ತಂಡ ತಡೆದು ಹಲ್ಲೆ ನಡೆಸಿದೆ. ಇದನ್ನು ನೋಡಿದ ಜಾರಪ್ಪ ನಾಯ್ಕ್ ಹಲ್ಲೆ ಬಿಡಿಸಲು ಬಂದಾಗ ಅವರ ಮೇಲೂ ಯುವಕರು ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಜಾರಪ್ಪ ನಾಯ್ಕ್ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆ ತರುವ ವೇಳೆ ಮೃತಪಟ್ಟರು.

ಮೃತ ಜಾರಪ್ಪ ನಾಯ್ಕ್ ಅವರ ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಗಂಭೀರ ಗಾಯಗೊಂಡ ನಾರಾಯಣ ನಾಯ್ಕ್ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಜಾರಪ್ಪ ನಾಯ್ಕ್ ಅವರ ಪುತ್ರ ರಾಜಶೇಖರ್ ದೂರು ನೀಡಿದ್ದು, ಹರಿಪ್ರಸಾದ್, ಚಂದ್ರಕಾಂತ್, ಮನೋಹರ್ ಹಾಗೂ ಇನ್ನೋರ್ವ ಅಪರಿಚಿತ ಸೇರಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಹರಿಪ್ರಸಾದ್ ಅವರಿಗೆ ಹಾಗೂ ಹಲ್ಲೆಗೊಳಗಾದ ನಾರಾಯಣ ನಾಯ್ಕ್ ನಡುವೆ ಜಾಗದ ತಕರಾರು ಇತ್ತು ಎನ್ನಲಾಗಿದೆ.

Related Posts

Leave a Reply

Your email address will not be published.