ಬೈಂದೂರು : ಕೆಸರಲ್ಲೊಂದು ದಿನ ಗಮ್ಮತ್ ಕಾರ್ಯಕ್ರಮ
ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ನೇತೃತ್ವದಲ್ಲಿ ಕೆಸರಲ್ಲೊಂದು ದಿನ ಗಮ್ಮತ್ ಕಾರ್ಯಕ್ರಮವು ನೆಲ್ಯಾಡಿ ಬೈಲ್ & ಜೆ.ಎನ್.ಆರ್ ಹಾಲ್, ಯಡ್ತರೆ-ಬೈಂದೂರಿನಲ್ಲ ಅದ್ದೂರಿಯಾಗಿ ನಡೆಯಿತು.
ಶಾಸಕ ಗುರುರಾಜ ಗಂಟಿಹೊಳೆ ಕಾರ್ಯಕ್ರಮನ ಉದ್ಘಾಟಿಸಿ ಮಾತನಾಡಿ, ಕುಂದಾಪ್ರ ಕನ್ನಡ ಕೇವಲ ಭಾಷೆಯಲ್ಲ ಅದು ಈ ನೆಲದ ಬದುಕು, ಸಂಸ್ಕೃತಿ ಆಚರಣೆಯ ಹೂರಣ. ಇದನ್ನು ಮುಂದಿನ ತಲೆಮಾರುಗಳಿಗೆ ಮುಂದುವರಿಸಲು ಇಂತಹ ಕಾರ್ಯಕ್ರಮ ಮುಖ್ಯ. ಮುಂಬಯಿ, ಬೆಂಗಳೂರಿನಂತಹ ಮಹಾನಗರಪ್ರದೇಶದಲ್ಲಿರುವಕುಂದಾಪುರ ತಾಲೂಕಿನವರು ಆ ಭಾಗದಲ್ಲಿಯೂ ಕೂಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕುಂದಾಪ್ರ ಕನ್ನಡದ ಕೀರ್ತಿ ವೃದ್ಧಿಸಿದ್ದಾರೆ. ಇದು ಕೇವಲ ಭಾಷೆಯಲ್ಲ ಬದುಕು ಎಂದರು.
ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ, ಕುಂದಾಪ್ರ ಕನ್ನಡ ಭಾಷಿಗನಾಗಿ ರುವುದು ಹೆಮ್ಮೆ ಇದೆ. ಈ ಭಾಷೆಯಲ್ಲಿ ಹಲವಾರು ಚಲನಚಿತ್ರ ನಿರ್ಮಾಣ ಮಾಡಿದ್ದೇನೆ. ಜತೆಗೆ ಹಾಡುಗಳನ್ನು ಬರೆದಿದ್ದು, ಅವುಗಳನ್ನು ಈಗಾಗಲೇ ಜನರು ಗುನುಗುನಿಸಿದ್ದಾರೆ. ಇದೇ ರೀತಿ ಈಗ ವೀರ ಚಂದ್ರಹಾಸ ಯಕ್ಷಗಾನ ಪ್ರಸಂಗವನ್ನು ಬೆಳ್ಳಿತೆರೆಯ ಮೇಲೆ ತರುವ ಸಾಹಸ ಮಾಡಿದ್ದೇನೆ. ಯಕ್ಷಗಾನವನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದರು.
ಪ್ರತಿಷ್ಠಾನದ ಮುಖ್ಯಸ್ಥ ಶರತ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟ ಪ್ರಮೋದ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು ಇವರನ್ನು ಸಮ್ಮಾನಿಸಲಾಯಿತು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪ್ರಮುಖರಾದ ಕಿಶೋರ ಕುಮಾರ್ ಕುಂದಾಪುರ, ಎಚ್. ಜಯಶೀಲ ಎನ್. ಶೆಟ್ಟಿ, ಎನ್. ಜಗನ್ನಾಥ ಶೆಟ್ಟಿ, ಜಯಾನಂದ ಹೋಬಳಿದಾರ್, ನೆಲ್ಯಾಡಿ ದೀಪಕ್ ಕುಮಾರ್‌ಶೆಟ್ಟಿ ವೆಂಕಟರಮಣ ಬಿಜೂರು, ರಘುರಾಮ ಪೂಜಾರಿ ಶಿರೂರು, ಮದನ ಕುಮಾರ್ ಉಪ್ಪುಂದ, ಎನ್. ದಿವಾಕರ ಶೆಟ್ಟಿ ಉಪನ್ಯಾಸಕ ನವೀನ್ ಎಚ್. ಜಿ., ವಸಂತ ಗಿಳಿಯಾ ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಜಿ. ಸ್ವಾಗತಿಸಿ, ಅರುಣ ಕುಮಾರ್ ಶಿರೂರು ನಿರೂಪಿಸಿದರು. ಸುನಿಲ್ ಎಚ್. ಜಿ. ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕು, ಪೃಥ್ವಿ ಕ್ರೀಡಾ ಮತ್ತು ಯುವಕ ಸಂಘ ಬೈಂದೂರು, ಫ್ರೆಂಡ್ಸ್ ಕ್ಲಬ್ ಉಪುಂದ, ಬೈಂದೂರು ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸಹಯೋಗ ನೀಡಿದ್ದವು.ಯಡ್ತರೆ ಬೈಪಾಸಿನಿಂದ ಮೆರವಣಿಗೆ ನಡೆಯಿತು. ಮಹಿಳೆ, ಪುರುಷರು ಹಾಗೂ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.