ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಖಾಸಗಿ ಬಸ್ ಮಾಲೀಕರು ಹಾಗೂ ಕೆಎಸ್ ಆರ್ ಟಿಸಿ, ಆರ್ ಟಿಒ ಅಧಿಕಾರಿಗಳ ಸಭೆ

ಬೈಂದೂರು: ಬೈಂದೂರು ತಾಲೂಕಿನಾದ್ಯಂತ ವಿವಿಧ ಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಎದುರಿಸುತ್ತಿರುವ ಸಾರಿಗೆ ಸಮಸ್ಯೆಗೆ ಸೂಕ್ತ ಪರಿಹಾಕರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕಾರದ ಗುರುರಾಜ್ ಗಂಟಿಹೊಳೆ ಅವರು ಶುಕ್ರವಾರ ಉಪ್ಪುಂದದ ಕಾರ್ಯಕರ್ತ ಕಚೇರಿಯಲ್ಲಿ ಖಾಸಗಿ ಬಸ್ ಮಾಲೀಕರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಆರ್‌ಟಿಓ ಅಧಿಕಾರಿಗಳ ಸಭೆ ನಡೆಸಿದರು.

ಕೆಎಸ್‌ಆರ್‌ಟಿಸಿಗೆ ಸೂಚನೆ
ಖಾಸಗಿ ಬಸ್ ಇಲ್ಲದ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಕ್ಷಣದಿಂದಲೇ ಓಡಿಬೇಕು. ಹಾಗೆಯೇ ಖಾಸಗಿ ಬಸ್ ಮಾಲೀಕರು ಯಾವ ರೂಟ್‌ಗೆ ಪರ್ಮಿಟ್ ಪಡೆದಿದ್ದಾರೋ ಅದೇ ರೂಟ್‌ನಲ್ಲಿ ಬಸ್ ಓಡಿಸಬೇಕು. ಒಂದೊಮ್ಮೆ ಆ ರೂಟ್‌ನಲ್ಲಿ ಬಸ್ ಓಡಿಸದೇ ಇದ್ದರೆ ಅಲ್ಲಿಗೆ ಕೆಎಸ್‌ಆರ್‌ಟಿಸಿ ಬಸ್ ಓಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಸಮನ್ವಯ ಸಾಧಿಸಿಕೊಳ್ಳಬೇಕು
ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟದ ಸಮಯವು ಒಂದೇ ಆದಲ್ಲಿ ಘರ್ಷಣೆಯ ಜತೆಗೆ ಪ್ರಯಾಣಿಕರಿಗೂ ಅನಾನುಕೂಲವಾಗುತ್ತದೆ. ಹೀಗಾಗಿ ಸಮನ್ವಯದಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಇಬ್ಬರಿಗೂ ಸಮಸ್ಯೆ ಆಗದ ರೀತಿಯಲ್ಲಿ ಪ್ರತಿ ನಿಲ್ದಾಣವಾರು ಸಮಯ ನಿಗದಿ ಮಾಡಲು ಆರ್‌ಟಿಓ ಹಾಗೂ ಕೆಎಸ್‌ಆರ್‌ಟಿಸಿಯವರಿಗೆ ನಿರ್ದೇಶನ ನೀಡಿದರು.

ವಿದ್ಯಾರ್ಥಿಗಳಿಗೆ ಬಸ್ ಸೇವೆ ಅಗತ್ಯ ಒದಗಿಸಿ
ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಾಲೆ ಕಾಲೇಜುಗಳಿಗೆ ತಲುಪಲು ಹಾಗೂ ಮನೆಗೆ ಹಿಂದಿರುಗಲು ಅನುಕೂಲವಾಗುವಂತೆ ಕೆಎಸ್ ಆರ್ ಟಿ ಸಿ ಹಾಗೂ ಖಾಸಗಿ ಬಸ್ ಗಳು ನಿಲ್ದಾಣಗಳಲ್ಲಿ ಲಭ್ಯ ವಾಗುವಂತೆ ಕ್ರಮ ವಹಿಸಬೇಕು. ಶಾಲಾ ಕಾಲೇಜು ಬಿಡುವ ಸಮಯ ನೋಡಿಕೊಂಡು ಬಸ್ ಟ್ರಿಪ್ ಹೊಂದಿಸಲು ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.

ಗ್ರಾಮೀಣ ಭಾಗದಲ್ಲಿ ಬಸ್ ಸೇವೆ ವಿಸ್ತರಿಸಿ
ಕ್ಷೇತ್ರದ ಹಲವು ಗ್ರಾಮಗಳಲ್ಲಿ ಗ್ರಾಾಮದ ಅಂತಿಮ ಬಸ್ ನಿಲ್ದಾಣದಿಂದ 5-6 ಕಿ ಮೀ ವ್ಯಾಪ್ತಿಯಲ್ಲಿ ಹೊಸ ರಸ್ತೆಗಳಿಗೆ ಸಾರ್ವಜನಿಕರ ಬೇಡಿಕೆ ಗಳಿಗೆ ಅನುಗುಣವಾಗಿ ಬಸ್ ಸೇವೆ ವಿಸ್ತರಿಸಲು ಅವಕಾಶ ಇರುವುದರಿಂದ ಅದರಂತೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲು ಆರ್ ಟಿಓ ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ 40-50 ಕಿಮಿ ಗಳಿಗಿಂತಲೂ ಹೆಚ್ಚು ಅಂತರ ವಿರುವ ಗ್ರಾಮೀಣ ಪ್ರದೇಶ ಗಳಿಂದ ನಗರದ ಕಾಲೇಜು ಗಳಿಗೆ ಬರುವ ವಿದ್ಯಾರ್ಥಿಗಳಿಗೆ ಕಾಲೇಜು ತಲುಪುವ ಪ್ರಯಾಣ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಕಾರಣವಾಗದಂತೆ ಸೂಕ್ತ ಸಮಯಕ್ಕೆ ಬಸ್ ಸಿಗುವ ಹಾಗೆ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ಎಲ್ಲ ರೀತಿಯ ಹೋರಾಟಕ್ಕೂ ಸೈ
ವಿದ್ಯಾರ್ಥಿ ಜೀವನ ಬದುಕಿನ ಅತೀ ಮುಖ್ಯ ಘಟ್ಟವಾಗಿರುವುದರಿಂದ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣಕ್ಕಾಗಿ ಶಿಕ್ಷಣ ಮೊಟಕು ಗೊಳಿಸುವ ಸನ್ನಿವೇಶ ಕ್ಷೇತ್ರದಲ್ಲಿ ಸೃಷ್ಟಿಯಾಗುವುದು ಹಾಗೂ ಬಸ್ ಗಳು ಸರಿಯಾದ ಸಮಯಕ್ಕೆ ಸಿಗದೇ ಇರುವ ಕಾರಣಕ್ಕಾಾಗಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಈ ದೆಸೆಯಲ್ಲಿ ಇಲಾಖೆ ಅಗತ್ಯ ಕ್ರಮವಹಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳ ಜೊತೆ ಯಾವುದೇ ಹಂತದ ಹೋರಾಟ ನಡೆಸಲಿದ್ದೇವೆ ಎಂಬ ಎಚ್ಚರಿಕೆ ನೀಡಿದರು.
ಶಕ್ತಿಯೋಜನೆ ಖಾಸಗಿಯವರಿಗೂ ವಿಸ್ತರಿಸಿ
ಕರಾವಳಿ ಭಾಗದಲ್ಲಿ ಖಾಸಗಿ ಬಸ್ ಸೇವೆ ಹೆಚ್ಚಿರುವುದರಿಂದ ಹಾಗೂ ಅವಶ್ಯವಿರುವ ಅನೇಕ ಕಡೆಗಳಿಗೆ ಸೇವೆ ಒದಗಿಸುತ್ತಿರುವುದರಿಂದ ಸರ್ಕಾರದ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಎಂದು ಹೇಳಿದರು.
ಶೌಚಾಲಯ ವ್ಯವಸ್ಥೆ ಕಲ್ಪಿಸಿ
ಖಾಸಗಿ ಬಸ್ಸು ಹೊಂದಿರುವ ಬಸ್ಸು ಮಾಲೀಕರು ಹಾಗೂ ನಿರ್ವಹಕರು ಕೊರೋನ ಕಾರಣದಿಂದ ಸಾಕಷ್ಟು ಸಂಕಷ್ಟ ಗಳನ್ನು ಎದುರಿಸಿದ್ದಾರೆ. ಜಿಲ್ಲೆಯಲ್ಲಿ ಹಲವು ದಶಕಗಳಿಂದ ಸಾರ್ವಜನಿಕರಿಗೆ ಬಸ್ ಸೇವೆ ಒದಗಿಸುತ್ತಾ ಬಂದಿರುತ್ತಾರೆ ಹಾಗಾಗಿ ಅವರ ನ್ಯಾಯ ಬದ್ಧ ಬೇಡಿಕೆ ಗಳಿಗೆ ಇಲಾಖೆ ಮನ್ನಣೆ ನೀಡಬೇಕು. ರಾತ್ರಿ ವೇಳೆ ಸಂಚರಿಸುವ ಖಾಸಗಿ ಬಸ್ ಪ್ರಯಾಣಿಕರು ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದೆ ಸಂಕಟ ಅನುಭವಿಸುತ್ತಿರುವುದರಿಂದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಾಣ ಗಳಲ್ಲಿ ಈ ಉದ್ದೇಶಕ್ಕಾಗಿ ಖಾಸಗಿ ಬಸ್ಸಿನವರಿಗೂ ಅವಕಾಶ ಮಾಡಿ ಕೊಡಬೇಕು ಎಂದು ಖಾಸಗಿ ಬಸ್ ಒಕ್ಕೂಟದವರು ಮನವಿ ಮಾಡಿದಂತೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸ ಬಸ್ ಶೀಘ್ರ ಒದಗಿಸಿ
ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಾಗಿ ಹೊಸದಾಗಿ ಬಸ್ ಬೇಡಿಕೆ ಯ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದು ಅದರ ಬಗ್ಗೆ ಮತ್ತೊಮ್ಮೆ ಶಾಸಕರು ಕೇಳಲಾಗಿ ಶಾಲಾ ಕಾಲೇಜು ವಿದ್ಯಾಾರ್ಥಿಗಳ ಅನುಕೂಲಕ್ಕಾಾಗಿ ಕಾಲೇಜಿನ ಸಮಯಕ್ಕೆ ಹೊಂದಾಣಿಕೆ ಆಗುವ ಹಾಗೆ 14 ಹೊಸ ಮಾರ್ಗ ಗಳಲ್ಲಿ ಬಸ್ ಓಡಿಸಲು ಆ ಮಾರ್ಗಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದಾಗ ಅಂತಹ ಮಾರ್ಗ ಗಳನ್ನು ಪರಿಶೀಲನೆ ನಡೆಸಿ ಖಾಸಗಿ ಯವರಿಗೆ ಸಾದ್ಯವಾದರೆ ಅವಕಾಶ ಮಾಡಿ ಕೊಡುವುದು ಇಲ್ಲವಾದರೆ ಇಲಾಖೆಯಿಂದ ಬಸ್ ಓಡಿಸಲು ತುರ್ತು ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.
ಖಾಸಗಿ ಬಸ್ ಮಾಲೀಕರಾದ ಕುಯಿಲಾಡಿ ಸುರೇಶ್ ನಾಯಕ್, ಸದಾನಂದ ಚಾತ್ರ ಶಿವಾನಂದ ಗಾಣಿಗ, ಸುರೇಶ್ ಶೆಟ್ಟಿ, ಉಪ್ಪುಂದ ಮೊದಲಾದವರು ಭಾಗವಹಿಸಿ ಅನೇಕರ ಸಲಹೆ ನೀಡಿದ್ದಾರೆ ಮತ್ತು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ , ಡಿಸಿ ರಾಜೇಶ್ ಶೆಟ್ಟಿ ಮಂಗಳೂರು ವಿಭಾಗ ಹಾಗೂ ಆರ್‌ಟಿಒ ಎಲ್ ಪಿ ನಾಯಕ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.