ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ

ಮಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿಯವರು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ರಾಜ್ಯಕ್ಕೆ ಬಿಜೆಪಿಯ ಮೂರನೇ ಮುಖ್ಯಮಂತ್ರಿ ಬರಲಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್‍ನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ, ಹಿರಿಯರಾದ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಎದುರಿಸುತ್ತೇವೆ ಎಂದಿದ್ದಾರೆ.

ಸಿದ್ದರಾಮಯ್ಯ ಉತ್ಸವದ ಬಳಿಕ ಕಾಂಗ್ರೆಸ್‍ನಲ್ಲಿ ಒಳ ಜಗಳ, ಬೀದಿ ಜಗಳ ಹೆಚ್ಚಾಗಿದೆ. ಕೋಳಿವಾಡರಂತಹ ಹಿರಿಯ ನಾಯಕರು ಸಿದ್ದರಾಮಯ್ಯರನ್ನು ಬಯ್ಯುವಂತಾಗಿದೆ. ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹೋರಾಟ ಹೆಚ್ಚಾಗಿದೆ. ಅವರ ಒಳ ಜಗಳ, ಬೀದಿ ಜಗಳ, ಗೊಂದಲ, ಆಂತರಿಕ ಕಚ್ಛಾಟವನ್ನು ಮುಚ್ಚಿಡಲು ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡಿದೆ ಎಂದು ಹೇಳಿದ್ದಾರೆ. ಗೊಂದಲ ಸೃಷ್ಟಿಸುವ ಕಾಂಗ್ರೆಸ್ ಆಟ ನಡೆಯುವುದಿಲ್ಲ, ಮೊದಲು ಅವರಲ್ಲಿರುವ ಗೊಂದಲವನ್ನು ಸರಿ ಮಾಡಿಕೊಳ್ಳಲಿ, ಕಾಂಗ್ರೆಸ್ ಭವಿಷ್ಯ ಏನೆಂಬುದು ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಹಗರಣಗಳು ಬಯಲಿಗೆ ಬಂದಿದೆ. ಸೋನಿಯಾ, ರಾಹುಲ್ ಗಾಂಧೀಜಿ ಇಡಿ ತನಿಖೆ, ಡಿಕೆಶಿಯವರಿಗೆ ಜಾಮೀನು, ಮುಖ್ಯಮಂತ್ರಿ ಗೊಂದಲ, ದಲಿತ ಮುಖ್ಯಮಂತ್ರಿ ಚರ್ಚೆ ಇವೆಲ್ಲ ಗೊಂದಲಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಇಂತಹ ಟ್ವೀಟ್ ಮಾಡುತ್ತಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಬೊಮ್ಮಯಿವರು ಪೂರ್ಣವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published.