ಶರಣ್ ಪಂಪ್ ವೆಲ್ ನನ್ನು ಗಡಿ ಪಾರು ಮಾಡುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಅವರ ನೇತೃತ್ವದಲ್ಲಿ ಮನವಿ

ಭಾಷಣ ಮಾಡಿದ ಭಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಅವರ ನೇತೃತ್ವದ ಕಾಂಗ್ರೆಸ್ ನಿಯೋಗ ಸೋಮವಾರ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

“ದ.ಕ. ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿದ್ದು, ಕೋಮುಸಂಘರ್ಷವನ್ನು ಉಂಟುಮಾಡುವ ಜನಾಂಗೀಯ ಹತ್ಯೆಗೆ ಪ್ರಚೋದನೆ ನೀಡುವ ಭಾಷಣಗಳು ಮಾಧ್ಯಮದ ಮುಖಾಂತರ ವೈರಲ್ ಆಗುತ್ತಾ ಇದೆ. ಇದು ತೀರಾ ಆತಂಕಕಾರಿ ಬೆಳವಣಿಗೆ, ನಾಗರಿಕ ಸಮಾಜದಲ್ಲಿ ಭೀತಿಯನ್ನು ಉಂಟು ಮಾಡಿದೆ. ಶರಣ್ ಪಂಪ್‌ವೆಲ್‌ನ ಈ ಅತಿರೇಕದ ದ್ವೇಷ ಭಾಷಣ ಕೊಲೆಗಳ ಸಮರ್ಥನೆ, ಬೆದರಿಕೆ, ಜನಾಂಗೀಯ ಹತ್ಯೆಗೆ ಪ್ರಚೋದನೆ ನೀಡುವಂತಿದೆ. ‘ನಿರುದ್ಯೋಗ’, ಬಡತನದಿಂದ ಹತಾಶಗೊಂಡಿರುವ ಯುವಕರ ಕೈಗೆ ತಲವಾರು ನೀಡಿ ಗಲಭೆಗೆ ಇಳಿಸುವ ಸಮಾಜವನ್ನು ವಿಭಜಿಸುವ ಈ ಮನಸ್ಥಿತಿಯು ಅತ್ಯಂತ ಅಪಾಯಕಾರಿ. ಇದು ಚುನಾವಣಾ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ, ರಾಜಕೀಯ ದುರುದ್ದೇಶಗಳನ್ನು ಹೊಂದಿದೆ. ಕೊಲೆ, ನರಮೇಧದ ಸಮರ್ಥನೆಯ ಭಾಷಣಕ್ಕಾಗಿ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಈತನನ್ನು ಕಠಿಣ ಕಾಯ್ದೆಯಡಿಯಲ್ಲಿ ಬಂಧಿಸಿ, ರಾಜ್ಯದಿಂದಲೇ ಗಡಿ ಪಾರು ಮಾಡಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಸಂತೋಷ್ ಕುಮಾರ್ ಶೆಟ್ಟಿ, ಸಿ.ಎಂ.ಮುಸ್ತಫಾ, ಶಾಲೆಟ್ ಪಿಂಟೊ, ಎಸ್.ಅಪ್ಪಿ, ಜೆಸಿಂತಾ, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಗೀತಾ ಅತ್ತಾವರ, ಚಂದ್ರಕಲಾ ಡಿರಾವ್ ಮತ್ತಿತರರಿದ್ದರು

Related Posts

Leave a Reply

Your email address will not be published.