ಯಶ ಆಟಿಸಂ ಕೇಂದ್ರದ ವಾರ್ಷಿಕೋತ್ಸವ

ಮಂಗಳೂರು: ನಗರದ ಕಾವೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಶ ಆಟಿಸಂ ಕೇಂದ್ರದ ವಾರ್ಷಿಕೋತ್ಸವವನ್ನು ಕಾವೂರು ಸರಕಾರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 22ರಂದು ಆಚರಿಸಲಾಯಿತು.

ಕಾರ್ಯಕ್ರಮವನ್ನು ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಗೋಪಾಲ ಕೃಷ್ಣ ಉದ್ಘಾಟಿಸಿದರು.

ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕ ವಿವರಗಳನ್ನು ಆಡಳಿತ ಟ್ರಸ್ಟಿ ದುರ್ಗಾಲಕ್ಷ್ಮೀ ಪ್ರಸ್ತುತಪಡಿಸಿದರು.ಮತ್ತು ವಾರ್ಷಿಕ ಚಟುವಟಿಕೆಗಳನ್ನು ಮಂಡಿಸಿದರು. ವಯಸ್ಸಾಗುತ್ತಿದ್ದಂತೆ ಆಟಿಸಂ ಸ್ಥಿತಿಯನ್ನು ಹೊಂದಿರುವವರ ನಿರ್ವಹಣೆಗೆ ನುರಿತ ಪರಿಣಿತರನ್ನು ಒದಗಿಸುವ ವ್ಯವಸ್ಥೆ ಇಲಾಖೆಯಿಂದ ಕಲ್ಪಿಸಬೇಕು, ಸರಕಾರೀ ಪ್ರಾಯೋಜಿತ ಕ್ರೀಡಾಕೂಟದಲ್ಲಿ ಆಟಿಸಂ ಸ್ಥಿತಿಯನ್ನು ಹೊಂದಿರುವವರಿಗೆ ಪ್ರತ್ಯೇಕ ಗುಂಪನ್ನು ರಚಿಸಬೇಕು ಮತ್ತು ಪೋಷಕರ ಕುಟುಂಬ ಪಿಂಚಣಿಯನ್ನು ಅವರ ಜೀವಿತಾವಧಿಯಲ್ಲಿಯೇ ಮಂಜೂರು ಮಾಡುವ ಪ್ರಸ್ತಾವವನ್ನು ಸರ್ಕಾರದ ಮುಂದಿದ ಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟರು.ಉದ್ಘಾಟನಾ ಭಾಷಣದ ಸಂದರ್ಭದಲ್ಲಿ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಇಲಾಖೆಯ ಮುಂದಿಡುವುದಾಗಿ ಗೋಪಾಲ ಕೃಷ್ಣ ಅವರು ಭರವಸೆ ನೀಡಿದರು.

ಅಲ್ಲದೆ ಯಶ ಸಂಸ್ಥೆ ಆಟಿಸಂ ಮಕ್ಕಳ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಗೆ ಸರ್ಕಾರದ ಅನುದಾನ ಇಲ್ಲದೆ ಇರುವುದರಿಂದ ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸಲು ದಾನಿಗಳು ಮುಂದೆ ಬರಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಂ ಅವರು ಇತರ ವಿದ್ಯಾ ಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ಯಶ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ.ವಿ.ಶೆಟ್ಟಿ ಕಾಲೇಜಿನ ವಿಶೇಷ ಶಿಕ್ಷಕ ಮಂಜುನಾಥ, ಆಟಿಸಂ ಸ್ಥಿತಿಯನ್ನು ಸುಧಾರಿಸಲು ಮಕ್ಕಳ ಸಾಮರ್ಥ್ಯಕ್ಕನುಗುಣವಾಗಿ ತರಬೇತಿ ನೀಡ ಬೇಕಾಕುತ್ತದೆ. ಸಾಮಾಜಿಕ ಕೌಶಲಗಳನ್ನು ಕಲಿಸುವ ಪ್ರಯತ್ನ ನಿರಂತರವಾಗಿರಬೇಕು ಎಂದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕುಶ ನಾಯ್ಕ್ ಮಾತನಾಡಿ ಸೂಕ್ತ ತರಬೇಟಿ ನೀಡಿದಾಗ ಇಂತಹ ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡ ಬಹುದು ಎಂದರು.

ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪುಷ್ಪಲತಾ ನಡೆಸಿಕೊಟ್ಟರು. ಟ್ರಸ್ಟಿ ವಿದ್ಯಾ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಜಿ.ಕೆ.ಭಟ್ ಇಂತಹ ಮಕ್ಕಳಿರುವಲ್ಲಿ ಕೌಟುಂಬಿಕ ವಾತಾವರಣ ಉತ್ತಮವಾಗಿರಬೇಕು ಎಂದರು.

ಯಶ ಸಂಸ್ಥೆಗೆ ಸಹಕರಿಸುತ್ತಿರುವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಅಭಿನಂದಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿದರು ಮತ್ತು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಶಿಕ್ಷಕಿ ಚಂದ್ರಿಕಾ ಮತ್ತು ಟ್ರಸ್ಟಿ ಸುನಿಲ್ ಅತಿಥಿಗಳನ್ನು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಮೋಹಿನಿ ಮತ್ತು ರೆಡ್ ಕ್ರಾಸ್ ಘಟಕದ ರೇಖಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಮತ್ತು ಇವರ ಮನರಂಜನೆಗಾಗಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ ಇವರಿಂದ ವಿಶ್ವೇಶ್ವರ ಭಟ್ ನೇತೃತ್ವದಲ್ಲಿ “ಧ್ರುವ ಚರಿತ್ರೆ” ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು. ಶಿಶಿರ ಕೃಷ್ಣ ಅವರ ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮ ಮಂಜುನಾಥ ಅವರ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು.

Related Posts

Leave a Reply

Your email address will not be published.