HomeFresh Newsಪರವಾನಿಗೆ ನವೀಕರಣದ ವಿವಾದ – ಇಚ್ಲಂಪಾಡಿಯ ‘ಅಕ್ಷಯ ಹೋಟೆಲ್’ ಬಂದ್ ಮಾಡಿಸಿದ ತಾ.ಪಂ. ಇಒ

ಪರವಾನಿಗೆ ನವೀಕರಣದ ವಿವಾದ – ಇಚ್ಲಂಪಾಡಿಯ ‘ಅಕ್ಷಯ ಹೋಟೆಲ್’ ಬಂದ್ ಮಾಡಿಸಿದ ತಾ.ಪಂ. ಇಒ

ಕಡಬ ಪರವಾನಿಗೆ ನವೀಕರಣ ಮಾಡದೇ ವ್ಯಾಪಾರ ಮಾಡುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ನೇರ್ಲ ಎಂಬಲ್ಲಿರುವ ಅಕ್ಷಯ ಹೋಟೆಲ್ ಅನ್ನು ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯ ವರು ಜು.೪ರಂದು ಸಂಜೆ ಬಂದ್ ಮಾಡಿಸಿದ್ದಾರೆ. ವಿವಾದ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವಾಗಲೇ ಯಾವುದೇ ನೋಟಿಸ್ ನೀಡದೇ ಹೋಟೆಲ್ ಬಂದ್ ಮಾಡಿಸುತ್ತಿರುವುದಕ್ಕೆ ಮಾಲಕರು ಹಾಗೂ ಅವರ ಪರ ವಕೀಲರು ಆಕ್ಷೇಪಿಸಿರುವ ಘಟನೆಯೂ ನಡೆದಿದೆ.

ಇಚ್ಲಂಪಾಡಿ ಗ್ರಾಮದ ನೇರ್ಲ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ಸ್ಥಳೀಯ ನಿವಾಸಿ ಈಶ್ವರ ಗೌಡ ಎಂಬವರು ತನ್ನ ಮನೆಗೆ ಹೊಂದಿಕೊಂಡು ಪ್ರತ್ಯೇಕ ಕಟ್ಟಡ ನಿರ್ಮಿಸಿ ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ನಿಂದ ಪರವಾನಿಗೆ ಪಡೆದುಕೊಂಡು ‘ಅಕ್ಷಯ್’ ಎಂಬ ಹೆಸರಿನಲ್ಲಿ ಮಾಂಸಹಾರಿ ಹಾಗೂ ಸಸ್ಯಾಹಾರಿ ಹೋಟೆಲ್ ನಡೆಸುತ್ತಿದ್ದರು. ಇದಕ್ಕೆ ಆಹಾರ ಇಲಾಖೆಯಿಂದ ಫುಡ್ ಸೇಫ್ಟಿ ಆಂಡ್ ಸ್ಟ್ಯಾಂಡರ್ಡ್ಸ್ ಆಕ್ಟ್-೨೦೦೬ರ ಅಡಿಯಲ್ಲಿ ಪರವಾನಿಗೆ ಹಾಗೂ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕವನ್ನೂ ಪಡೆದುಕೊಂಡಿದ್ದರು. ಈ ಮಧ್ಯೆ ಸದ್ರಿ ಹೋಟೆಲ್ ಕಟ್ಟಡವು ಅನಧಿಕೃತವಾಗಿದೆ. ಅಲ್ಲದೆ ಪರವಾನಿಗೆ ನವೀಕರಣ ಮಾಡದೆ ವ್ಯಾಪಾರ ನಡೆಸುತ್ತಿರುವ ಬಗ್ಗೆ ಹರೀಶ ಗೌಡ ಎಂಬವರು ನೂಜಿಬಾಳ್ತಿಲ ಗ್ರಾ.ಪಂ.ಗೆ ದೂರು ನೀಡಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ನೂಜಿಬಾಳ್ತಿಲ ಗ್ರಾಮ ಪಂಚಾಯತ್‌ನಿಂದ ಪರವಾನಿಗೆ ನವೀಕರಿಸಿರಲಿಲ್ಲ. ಅಲ್ಲದೇ ಹೋಟೆಲ್ ವ್ಯಾಪಾರ ಸ್ಥಗಿತಗೊಳಿಸುವಂತೆಯೂ ಈಶ್ವರ ಗೌಡ ಅವರಿಗೆ ಸೂಚನೆ ನೀಡಲಾಗಿತ್ತು. ಆದರೂ ಈಶ್ವರ ಗೌಡ ಅವರು ಹೋಟೆಲ್ ವ್ಯಾಪಾರ ಸ್ಥಗಿತಗೊಳಿಸದೇ ಇದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಜು.೪ರಂದು ಸಂಜೆ ಹೋಟೆಲ್ ಬಂದ್ ಮಾಡಿಸಿದ್ದಾರೆ.

ನೋಟಿಸ್ ನೀಡದೇ ಬಂದ್ ಮಾಡಿಸುತ್ತಿರುವುದಕ್ಕೆ ಆಕ್ಷೇಪ:
ಯಾವುದೇ ನೋಟಿಸ್ ನೀಡದೇ ಹೋಟೆಲ್ ವ್ಯಾಪಾರ ಬಂದ್ ಮಾಡಿಸುತ್ತಿರುವುದಕ್ಕೆ ಹೋಟೆಲ್ ಮಾಲಕರು ಹಾಗೂ ಅವರ ಪರ ವಕೀಲರು ಈ ವೇಳೆ ಆಕ್ಷೇಪ ಸೂಚಿಸಿದರು. ಹೋಟೆಲ್ ಮಾಲಕರ ಪರ ವಕೀಲರಾದ ಲೋಕೇಶ್ ಅವರು ಮಾತನಾಡಿ, ಮನೆಯ ಎದುರುಗಡೆ ಜೀವನೋಪಯಕ್ಕಾಗಿ ಅಂಗಡಿ ಇಟ್ಟು ವ್ಯವಹಾರ ನಡೆಸುತ್ತಿರುವ ಅನೇಕ ಪ್ರಕರಣಗಳಿವೆ. ಈ ಹೋಟೆಲ್ ಅಕ್ರಮ ಆಗಿದ್ದಲ್ಲಿ ಪಿಡಬ್ಲ್ಯುಡಿ, ತಹಶೀಲ್ದಾರ್ ಅವರಿಂದ ತನಿಖೆ ನಡೆಸಬೇಕಾಗಿತ್ತು. ಅಲ್ಲದೇ ವಿವಾದ ಕೋರ್ಟ್‌ನಲ್ಲಿ ವಿಚಾರಣೆ ಹಂದಲ್ಲಿರುವುವಾಗಲೇ ಯಾವುದೇ ನೋಟಿಸ್ ನೀಡದೇ ಬಂದ್ ಮಾಡಿಸಲು ಬಂದಿದ್ದೀರಿ. ನೋಟಿಸ್ ನೀಡಿದಲ್ಲಿ ಮಾಲಕರೂ ಅದಕ್ಕೆ ಉತ್ತರ ಕೊಡುತ್ತಿದ್ದರು. ೨೦೧೭ರಿಂದ ೨೦೨೫ರ ತನಕ ಅವರಿಗೆ ವ್ಯಾಪಾರಕ್ಕೆ ಗ್ರಾ.ಪಂ.ನಿಂದ ಪರವಾನಿಗೆ ನೀಡಲಾಗಿದೆ. ನ್ಯಾಯಾಲಯ ಯಥಾಸ್ಥಿತಿಗೆ ಆದೇಶಿಸಿದೆ. ಆದರೂ ನೀವು ಬಂದ್ ಮಾಡಲು ಬಂದಿದ್ದೀರಿ. ನೀವು ಮಾಲಕರ ಸಹೋದರನ ಏಜೆಂಟ್ ಆಗಿ ಬಂದ್ ಮಾಡಲು ಬಂದಿದ್ದೀರಿ ಎಂಬ ಅನುಮಾನ ಇದೆ. ಯಾವ ಉದ್ದೇಶದಲ್ಲಿ ನೀವು ಹೋಟೆಲ್ ಬಂದ್ ಮಾಡಿಸುತ್ತಿದ್ದೀರಿ. ಬಂದ್ ಮಾಡಲು ಇರುವ ಆದೇಶದ ಪ್ರತಿಯನ್ನಾದರೂ ನಮಗೆ ಕೊಡಿ. ನೈಸರ್ಗಿಕ ನ್ಯಾಯಕ್ಕೆ ನೀವು ಬದ್ಧರಾಗಿರಬೇಕು ಎಂದು ಹೇಳಿದರು.

ಕೋರ್ಟ್ ಆದೇಶದ ತನಕ ಅವಕಾಶ ಕೊಡಿ;
ವಿವಾದ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಜು.೮ರಂದು ಜಡ್ಜ್‌ಮೆಂಟ್ ಇದೆ. ಕೋರ್ಟ್‌ನಿಂದ ಆದೇಶ ಬರುವ ತನಕ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ. ಮಾಲಕರು ಕೋರ್ಟ್ ಮೊರೆ ಹೋದ ಬಳಿಕ ಗ್ರಾಮ ಪಂಚಾಯತ್‌ನಿಂದ ಪರವಾನಿಗೆ ನವೀಕರಣವೂ ಮಾಡಿಕೊಟ್ಟಿಲ್ಲ. ಕೋರ್ಟ್‌ನಿಂದ ಬಂದ್ ಮಾಡಲು ಆದೇಶ ಬಂದಲ್ಲಿ ಬಂದ್ ಮಾಡುತ್ತೇವೆ. ಕಾನೂನು ನಾವು ಪಾಲಿಸುತ್ತೇವೆ. ಅಲ್ಲಿ ತನಕ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ ಎಂದು ಮಾಲಕರ ಪರವಾಗಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ಅವರು ತಾ.ಪಂ.ಇಒ ಅವರಿಗೆ ಮನವಿ ಮಾಡಿದರು.

ಪರವಾನಿಗೆ ಚಾಲ್ತಿಯಲ್ಲಿಲ್ಲ;
ಗ್ರಾಮ ಪಂಚಾಯತ್‌ನಿಂದ ನೀಡಿರುವ ಪರವಾನಿಗೆ ಈಗ ಚಾಲ್ತಿಯಲ್ಲಿ ಇಲ್ಲ. ದೂರು ಬಂದ ಹಿನ್ನೆಲೆಯಲ್ಲಿ ವ್ಯಾಪಾರ ಸ್ಥಗಿತಕ್ಕೆ ಪಂಚಾಯತ್‌ನಿಂದ ನೋಟಿಸ್ ಸಹ ನೀಡಿದ್ದೇವೆ. ನಾವು ಅಂಗಡಿ ಸೀಝ್ ಮಾಡಲು ಬಂದಿಲ್ಲ. ವ್ಯಾಪಾರ ಮಾಡದಂತೆ ಸೂಚಿಸುತ್ತಿದ್ದೇವೆ. ಕೋರ್ಟ್‌ನಲ್ಲಿ ವಿಚಾರಣೆಯೂ ನಡೆಯುತ್ತಿರುವುದರಿಂದ ತೀರ್ಪು ಬರುವ ತನಕ ವ್ಯಾಪಾರ ಸ್ಥಗಿತಗೊಳಿಸುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರು ಹೇಳಿದರು. ಕನ್ವರ್ಷನ್, ೯/೧೧ ಸೇರಿದಂತೆ ಎಲ್ಲಾ ದಾಖಲೆ ತಂದು ಕೊಡಿ. ನಾವು ಪರವಾನಿಗೆ ನವೀಕರಣ ಮಾಡಿಕೊಡುತ್ತೇವೆ ಎಂದೂ ನವೀನ್ ಭಂಡಾರಿಯವರು ಮಾಲಕರಿಗೆ ಪರವಾನಿಗೆ ನೀಡಿದರು.

ಮಾಲಕರು ಹಾಗೂ ಅವರ ಪರ ವಕೀಲರೂ ನೋಟಿಸ್ ನೀಡದೇ ಬಂದ್ ಮಾಡಿಸುವುದಕ್ಕೆ ಆಕ್ಷೇಪಿಸಿದರೂ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರು ಹೋಟೆಲ್ ಬಂದ್ ಮಾಡಿಸಿದರು. ತಾ.ಪಂ.ಇಒ ಅವರ ಜೊತೆಗೆ ತಾ.ಪಂ.ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ, ನೂಜಿಬಾಳ್ತಿಲ ಗ್ರಾ.ಪಂ.ಪಿಡಿಒ ನಾರಾಯಣ, ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಡಬ ಪೊಲೀಸರು ಬಂದ್ ಬಸ್ತ್ ಒದಗಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments