ಮಲ್ಪೆಯಲ್ಲೊಬ್ಬ ಮಾನವೀಯತೆಯ ಮಹಾರಾಜ : ನಾಯಿಗೆ ನೆರವಾದ ಆಪ್ತರಕ್ಷಕ
ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಬಂದರು ಮತ್ತು ಸಮುದ್ರದಲ್ಲಿ ಅವಘಡಗಳು ಸಂಭವಿಸಿದಾಗ ತಮ್ಮ ಜೀವವನ್ನೇ ಪಣಕ್ಕಿಟ್ಟು ಸದಾ ನೆರವಿಗೆ ಧಾವಿಸುವ ಮಾನವೀಯತೆಯ ಸರದಾರ ಈಶ್ವರ್ ಮಲ್ಪೆ, ಈ ಬಾರಿ ಎರಡು ನಾಯಿಗಳನ್ನು ರಕ್ಷಣೆ ಮಾಡಿದ್ದಾರೆ. ನೀವು ನಂಬಲಿಕ್ಕಿಲ್ಲ, ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಈ ನಾಯಿಗಳು ಮಲ್ಪೆ ಬಂದರಿನ ಧಕ್ಕೆಯೊಳಗೆ ಹೊರ ಬರಲಾಗದೆ ಅಕ್ಷರಶಃ ಬಂಧಿಯಾಗಿದ್ದವು. ಎಲ್ಲ ಕಡೆ ನೀರಿನಿಂದ ಆವೃತವಾಗಿರುವುದರಿಂದ ನಾಯಿಗಳು ಒಳಗೇ ಬಂಧಿಯಾಗಿದ್ದವು. ಧಕ್ಕೆಯಲ್ಲಿ ಯಾರಾದರೂ ಎಸೆದ ತಿಂಡಿಗಳನ್ನು ತಿಂದು ಇವು ಬದುಕಿದ್ದವು. ಈ ವಿಷಯ ಅರಿತ ಅಪತ್ಭಾಂದವ ಈಶ್ವರ್ ಮಲ್ಪೆ, ನಾಯಿಗಳನ್ನು ಹೊರತೆಗೆಯಲು ಮುಂದಾದರು. ಇದಕ್ಕಾಗಿ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿದರು. ಹಗ್ಗ, ಟ್ಯೂಬ್ ಮೂಲಕ ಇಳಿದು ನಾಯಿಗಳನ್ನು ಹೊರತರಲು ಪ್ರಯತ್ನಿಸಿದರು. ಆದರೆ ಸುಲಭದಲ್ಲಿ ಅವು ಹೊರಬರಲಿಲ್ಲ.ಸುತ್ತಲೂ ಈ ಕಾರ್ಯಾಚರಣೆ ನೋಡಲು ಧಕ್ಕೆಯಲ್ಲಿ ಸಾಕಷ್ಟು ಜನ ಸೇರಿದ್ದರು. ತಾನು ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಮೇಲೆ ಬರುವವರಲ್ಲ, ಈಶ್ವರ್ ಮಲ್ಪೆ.ಜಾಣ್ಮೆಯಿಂದ ನಾಯಿಗಳ ಮನವೊಲಿಸಿ, ಹಗ್ಗದ ಮೂಲಕ ಹೊರ ತೆಗೆದರು. ಈ ನಾಯಿಗಳು ವರ್ಷದಿಂದ ಒಳಗೇ ಬಂಧಿಯಾಗಿದ್ದರಿಂದ ನಡೆಯಲೂ ಆಗುತ್ತಿರಲಿಲ್ಲ. ಕೊನೆಗೂ ನಾಯಿಗಳು ಹೊರಬಂದಾಗ ಈಶ್ವರ್ ಮಲ್ಪೆ ಅವರ ಮಾನವೀಯ ಕಾರ್ಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದರು.