ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಮಕ್ಕಳ ಹಕ್ಕುಗಳ ಕಾರ್ಯಾಗಾರ
ಉಜಿರೆ : ಸರ್ವತೋಮುಖ ಬೆಳವಣ ಗೆಗೆ ಪೂರಕವಾಗುವ ಮಕ್ಕಳ ಹಕ್ಕುಗಳ ಕುರಿತ ಅರಿವು ವ್ಯಾಪಕವಾಗಬೇಕು ಎಂದು ಟೋಕಿಯೊದ ಪ್ರೆಸ್ ಆಲ್ಟರ್ನೇಟಿವ್ ಪತ್ರಿಕೆಯ ಸಲಹೆಗಾರ್ತಿ ಮನೋರಮ ಭಟ್ ಜಿ.ವಿ ಅಭಿಪ್ರಾಯಪಟ್ಟರು. ಎಸ್ .ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜ ಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಮಕ್ಕಳ ಹಕ್ಕುಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮಕ್ಕಳು ಸಬಲರಾಗಬೇಕಾದರೆ ಅವರ ಕುಟುಂಬ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಎಲ್ಲ ಮಕ್ಕಳ ಮನೆ ಪರಿಸ್ಥಿತಿಗಳು ಒಂದೇ ರೀತಿ ಇರುವುದಿಲ್ಲ. ಕೆಲವರು ಬಡಕುಟುಂಬದವರಿದ್ದರೆ, ಕೆಲವರು ಸುಶಿಕ್ಷಿತ ಕುಟುಂಬದಲ್ಲಿರುತ್ತಾರೆ ಇನ್ನೂ ಕೆಲವರು ಏಕಮಾತೃ ಪೋಷಕರೊಂದಿಗೆ ಬೆಳೆಯುತ್ತಾರೆ. ಇಂತಹ ಮಕ್ಕಳ ಅಗತ್ಯಕ್ಕನುಗುಣವಾಗುವಂತೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ್ ಹೆಗ್ಡೆ ಮಾತನಾಡಿದರು.ಕಾರ್ಯಗಾರದ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರು ಮಕ್ಕಳ ಹಕ್ಕುಗಳ ಟ್ರಸ್ಟ್ ನ ತರಬೇತಿ ತಜ್ಞೆ ನಾಗಮಣ ಸಿ. ಎನ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್ .ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ಅಕ್ಷತ .ಕೆ ಸ್ವಾಗತಿಸಿ, ವಿದ್ಯಾರ್ಥಿನಿ ಮೇಧ ನಿರೂಪಿಸಿ, ಅಮ್ಮು. ಎಸ್ ವಂದಿಸಿದರು.