ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯಿಂದ ಕರಾವಳಿ ಮತ್ತು ಮಲೆನಾಡು ಭಾಗದ ರೈತರು ಹಾಗೂ ಸ್ಥಳೀಯ ನಿವಾಸಿಗಳ ಬದುಕಿಗೆ ಯಾವುದೇ ಕಾರಣಕ್ಕೂ ತೊಂದರೆ ಯಾಗಲು ಅಥವಾ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದ ಐತಿಹಾಸಿಕ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಕಸ್ತೂರಿ ರಂಗನ್ ವರದಿಯನ್ನು ನಮ್ಮ ಸರ್ಕಾರ ಈ ಹಿಂದೆಯೇ ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ ಕೇಂದ್ರದಿಂದ ಬಂದಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಸ್ಥಳೀಯ ರೈತರಲ್ಲಿ ಆತಂಕ ಮೂಡಿರುವುದು ಗಮನಕ್ಕೆ ಬಂದಿದೆ. ಈ ವಿಷಯದಲ್ಲಿ ರೈತರು ಹಾಗೂ ಜನಸಾಮಾನ್ಯರ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದರು.
ಈ ವಿಚಾರ ಎಷ್ಟು ಸೂಕ್ಷ್ಮ ಮತ್ತು ಗಂಭೀರ ಎಂಬುದನ್ನು ಅರಿತು ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಕಸ್ತೂರಿ ರಂಗನ್ ವರದಿಯ ಕುರಿತು ವಿಸ್ತೃತ ಚರ್ಚೆ ನಡೆಸಲಾಗುತ್ತದೆ. ಎರಡನೇ ದಿನ ಪೂರ್ಣ ಪ್ರಮಾಣದಲ್ಲಿ ರೈತರ ಸಮಸ್ಯೆಗಳ ಬಗ್ಗೆಯೇ ಚರ್ಚೆ ನಡೆಸಿ, ಎಲ್ಲಾ ಶಾಸಕರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಾನು ಖುದ್ದಾಗಿ ಬಾಧಿತ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದೇನೆ. ನೆಲಮಟ್ಟದಲ್ಲಿ ರೈತರು, ನಿವಾಸಿಗಳು ಮತ್ತು ಹೋರಾಟಗಾರರು ಎದುರಿಸುತ್ತಿರುವ ವಾಸ್ತವ ಸಂಕಷ್ಟಗಳ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ. ಜನರ ಬದುಕಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

