ಫಿಫಾ ವಿಶ್ವ ಕಪ್ ನಾಕೌಟ್ ಪಂದ್ಯಾವಳಿ ಆರಂಭವಾಗಿದ್ದು ಮೊದಲ ತಂಡವಾಗಿ ಕೆನಡಾ ಮತ್ತು ಬ್ರೆಜಿಲ್ಗಳು ಪ್ರಿಕ್ವಾರ್ಟರ್ ಹಂತಕ್ಕೆ ಏರಿದವು.
ಲಾಸ್ ಏಂಜೆಲ್ಸ್ನಲ್ಲಿ ನಡೆದ ಮೊದಲ 32ರ ಹಂತದ ಪಂದ್ಯದಲ್ಲಿ ಕೆನಡಾ ಗೆದ್ದು ಹದಿನಾರರ ಘಟ್ಟಕ್ಕೇರಿದ ಮೊದಲ ತಂಡವಾಯಿತು. ಪಂದ್ಯ ಮುಗಿಯಲು ಎರಡು ನಿಮಿಷ ಇದೆಯೆನ್ನುವಾಗ ಸ್ಟೆಫಾನ್ ಯೂಸ್ಟಾಕಿಯೋ ಅವರು ಗೋಲು ಹೊಡೆದರು; ಕೆನಡಾವು 1-0 ಗೋಲಿನ ರೋಮಾಂಚಕ ಜಯ ಪಡೆಯುವಂತೆ ಮಾಡಿದರು. ಇದೇ ಮೊದಲ ಬಾರಿಗೆ ಆಫ್ರಿಕಾ ಖಂಡದಿಂದ ಒಂಬತ್ತು ತಂಡಗಳು ನಾಕೌಟಿಗೇರಿದ್ದವು. ಅವುಗಳಲ್ಲಿ ಕೆನಡಾದೆದುರು ಸೋತ ದಕ್ಷಿಣ ಆಫ್ರಿಕಾ ಮೊದಲ ತಂಡವಾಗಿ ಹೊರಬಿದ್ದಿತು.

ನಾಕೌಟ್ ಪಂದ್ಯಾವಳಿಯ ಮೊದಲ ದಿನ ನಡೆದ ಇನ್ನೊಂದು ಪಂದ್ಯದಲ್ಲಿ ಬದಲಿ ಆಟಗಾರನಾಗಿ ಬಂದ ಗ್ಯಾಬ್ರಿಯೆಲ್ ಮಾರ್ಟಿನೆಲಿ ಹೊಡೆದ ನಿರ್ಣಾಯಕ ಗೋಲಿನಿಂದ ಬ್ರೆಜಿಲ್ ತಂಡವು ಜಪಾನ್ ತಂಡವನ್ನು 2-1 ಗೋಲಿನಿಂದ ಸೋಲಿಸಿ ಹದಿನಾರರ ಘಟ್ಟಕ್ಕೇರಿತು. ಕೈಶು ಸಾನೊ ಗೋಲಿನಿಂದ ಮೊದಲಾರ್ಧದಲ್ಲಿ ಜಪಾನ್ 1-0ಯಿಂದ ಮುಂದಿತ್ತು. ಎರಡನೆಯ ಭಾಗದ 56ನೇ ನಿಮಿಷದಲ್ಲಿ ಬ್ರೆಜಿಲ್ ಪರ ಕೆಸಿಮಿರೋ ಗೋಲು ಹೊಡೆದರು. ಇನ್ನೇನು ಡ್ರಾ ಎನ್ನುವಾಗ ಗ್ಯಾಬ್ರಿಯೆಲ್ ಗೋಲು ಹೊಡೆದು ಬ್ರೆಜಿಲ್ಲಿಗೆ ಜಯ ಕೊಡಿಸಿದರು.
ಫಿಫಾ ವಿಶ್ವ ಕಪ್ನ ಮೊದಲ ಹಂತದ ಬಳಿಕ ಆಟಗಾರರ ರ್ಯಾಂಕಿಂಗ್ ಪ್ರಕಟವಾಗಿದ್ದು ಜರ್ಮನಿಯ ಡೆನಿಜ್ ಉಂದಾವ್ ಮೊದಲ ರ್ಯಾಂಕ್ ಹೊಂದಿದ್ದಾರೆ. ಅರ್ಜೆಟೀನಾ ತಂಡದ ಲಿಯೋನೆಲ್ ಮೆಸ್ಸಿ ಎರಡನೆಯ ಮತ್ತು ಫ್ರಾನ್ಸ್ ತಂಡದ ಕಿಲಿಯನ್ ಎಂಬಾಪೆ ಮೂರನೆಯ ರ್ಯಾಂಕಿಂಗ್ ಪಡೆದಿದ್ದಾರೆ.

