ಮಾಣಿ: ಪೆರಾಜೆ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಇಲ್ಲದೆ ಕಡತಗಳು ಬಾಕಿ:ಸ್ಥಳೀಯರಿಂದ ಹಿಡಿಶಾಪ

ಮಾಣಿ ಪೆರಾಜೆ ಗ್ರಾಮ ಪಂಚಾಯತ್ ದಿಕ್ಕು ದೆಸೆ ಇಲ್ಲದ ಗ್ರಾಮ ಪಂಚಾಯತ್ ಆಗಿದೆ. ವಿದ್ಯಾರ್ಥಿಗಳು, ಸ್ಥಳೀಯರು, ಜಮೀನು ಖರೀದಿಸಿದವರು, ಪಹಣಿ ಪತ್ರಿಕೆ, ತಮ್ಮ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ- ಹೀಗೆ ನೂರಾರು ಕೆಲಸಗಳಿಗೋಸ್ಕರ ಪ್ರತಿದಿನವೂ ಗ್ರಾಮ ಪಂಚಾಯತ್ ಕಚೇರಿಗೆ ಬಂದು “ಬಂದ ದಾರಿಗೆ ಸುಂಕವಿಲ್ಲ” ಎಂಬಂತೆ ಬೇಸರದಿಂದ ಹಿಂದೆ ವಾಪಾಸಾಗುತ್ತಿದ್ದಾರೆ.

ಸ್ಥಳೀಯ ಶಾಸಕರು, ಸಂಸದರು, ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಮಾಣಿ ಪೇರಾಜೆ ಗ್ರಾಮ ಪಂಚಾಯಿತಿಗೆ ಗ್ರಾಮ ಲೆಕ್ಕಿಗರನ್ನು ನೇಮಿಸುವ ಬಗ್ಗೆ ಯಾವ ಕ್ರಮವನ್ನು ಕೈಗೊಂಡಿಲ್ಲ. ಮಾಣಿ ಪೇರಾಜೆ ಗ್ರಾಮಕ್ಕೆ ಚಂದ್ರಲೇಖ ಎಂಬವರು ಕಳೆದೊಂದು ವರ್ಷದಿಂದ ಗ್ರಾಮ ಲೆಕ್ಕಿಗರಾಗಿ ನೇಮಕಗೊಂಡಿದ್ದರು. ವಾರಕ್ಕೆ ಎರಡೇ ದಿನ ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಅವರು ಕಚೇರಿಗೆ ಬರುತ್ತಿದ್ದರು. ಆಗಲೇ ಸ್ಥಳೀಯರು ಅವರ ಬಗ್ಗೆ ಜಿಗುಪ್ಸೆಗೊಂಡು ಮಂಗಳೂರು ತಹಶೀಲ್ದಾರರಿಗೆ ತಿಳಿಸಿದ್ದರು ಎನ್ನಲಾಗಿದೆ. ಆದರೂ ಕೂಡ ವಾರದ ಆರು ದಿನವೂ ಕಚೇರಿ ಕೆಲಸಕ್ಕೆ ಬರಲು ಅವರಿಗೆ ಇಚ್ಛಾಸಕ್ತಿ ಇರಲಿಲ್ಲ.

ಇದೀಗ ಸುಮಾರು ತಿಂಗಳ ಹಿಂದೆ, ಅವರು ಅಪಘಾತಕ್ಕೀಡಾಗಿ ಕಾಲು ಫ್ರಾಕ್ಚರ್ ಆಗಿದ್ದು; ಅನಾರೋಗ್ಯದ ರಜೆಯಲ್ಲಿದ್ದಾರೆ. ನಿಯಮಾನುಸಾರ ಈ ವಿಚಾರವನ್ನು ಗ್ರಾಮ ಲೆಕ್ಕಿಗ ಚಂದ್ರಲೇಖ ಅವರು, ಮಂಗಳೂರು ತಹಶೀಲ್ದಾರರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ತಿಳಿಸಿ, ತನಗೆ ಕಚೇರಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಆದುದರಿಂದ ಕೂಡಲೇ ಬದಲಿ ಗ್ರಾಮ ಲೆಕ್ಕಿಗ ನೇಮಕವಾಗುವಂತೆ ನೋಡಿಕೊಳ್ಳಬೇಕಿತ್ತು. ಸ್ಥಳೀಯ ಶಾಸಕರಿಗೂ ಈ ಬಗ್ಗೆ ಸ್ಥಳೀಯರಿಂದ ದೂರು ಹೋಗಿದೆ ಎನ್ನಲಾಗಿದೆ ಆದರೆ ಪರಿಣಾಮ ಮಾತ್ರ ಶೂನ್ಯ.

ಸುಮಾರು 1,500 ಕುಟುಂಬಗಳಿರುವ ಈ ಗ್ರಾಮ ಪಂಚಾಯತ್ ನ ಬಹುತೇಕ ಕೆಲಸ ಕಾರ್ಯಗಳು ಸ್ತಬ್ಧಗೊಂಡಿವೆ ಇದರಿಂದಾಗಿ ಬಹಳಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಬಂದು ಹೋದ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ. ಸರಕಾರ ತಿಳಿಸಿದ ದಿನದೊಳಗೆ ಹಾಗೂ ಕ್ಲಪ್ತ ಸಮಯದಲ್ಲಿ, ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಿಂದ ವಿವಿಧ ಪ್ರಮಾಣ ಪತ್ರವನ್ನು ತೆಗೆದುಕೊಂಡು, ಅದನ್ನು ಸರಕಾರಕ್ಕೆ ಸಲ್ಲಿಸಬೇಕಾದ ಅವಧಿ ಮೀರಿ ಹೋದರೆ, ಸ್ಥಳೀಯ ಗ್ರಾಮಸ್ಥರಿಗೆ ಆಗುವ ನಷ್ಟವನ್ನು ಸರಕಾರವು ಹೇಗೆ ಭರ್ತಿ ಮಾಡಿಕೊಡಲಿದೆ.  ಮಾಣಿ ಪೆರಾಜೆ ಗ್ರಾಮ ಪಂಚಾಯಿತಿಗೆ ಗ್ರಾಮ ಲೆಕ್ಕಿಗರು ಇಲ್ಲದಿರುವುದರಿಂದ, ಹೊಸ ಗ್ರಾಮ ಲೆಕ್ಕಿಗರು ನೇಮಕಗೊಳ್ಳದಿರುವುದರಿಂದ, ಹಾಗೂ ಇದು ಸರಕಾರದ ತಪ್ಪು. ಆದ್ದರಿಂದ ಈ ಗ್ರಾಮಕ್ಕೆ ಮಾತ್ರ ಸಂಬಂಧ ಪಟ್ಟಂತೆ ಸರಕಾರಕ್ಕೆ ಸಲ್ಲಿಸಬೇಕಾದ ಪ್ರಮಾಣ ಪತ್ರಗಳ ದಿನಾಂಕವನ್ನು ಮುಂದೂಡಲಿದೆಯೇ ? ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಕೇಳುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರನ್ನು ನೀಡಿದ್ದಾರೆ.

Related Posts

Leave a Reply

Your email address will not be published.