ಮೀನುಗಳಿಗಿಂತ ಮುಂಚೆ ಮರುವಾಯಿ ತಿನಿಸು

ಮೀನು ಪುರಾತನ ಕಾಲದಿಂದಲೂ ಮಾನವನ ಆಹಾರವಾಗಿದೆ. ತುಳು ಕರಾವಳಿಯ ಮುಖ್ಯವಾಗಿ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಲ್ಲಿ ಒಟ್ಟಾರೆ ಮೀನು ಸಿಗುವುದು ತೃಪ್ತಿಕರವಾಗಿಲ್ಲ ಎಂದು ವರದಿಯಾಗಿದೆ. ವಹಿವಾಟು ಕೂಡ ಬಿಸಿ ಕಳೆದುಕೊಂಡಿದ್ದು ಮೀನುಗಾರರು ಚಿಂತೆಗೆ ಬಿದ್ದಿದ್ದಾರೆ. ಮಲ್ಪೆ, ಮಂಗಳೂರುಗಳ ಇನ್ನೊಂದು ಸಮಸ್ಯೆಯೆಂದರೆ ಮೀನಿನ ಬೋಟುಗಳು ಇಲ್ಲಿಯವರದೇ ಆದರೂ ಅದರಲ್ಲಿ ಈಗೆಲ್ಲ ದುಡಿಯುವವರು ವಲಸೆ ಕಾರ್ಮಿಕರೇ ಆಗಿದ್ದಾರೆ. ಅವರನ್ನು ನಿಬಾಯಿಸುವ ಸಮಸ್ಯೆಯನ್ನು ಹಲವರು ಎದುರಿಸುತ್ತಿದ್ದಾರೆ.


ಮೀನನ್ನು ಮಾನವನು ತಾನು ಹುಟ್ಟಿದಾಗಿನಿಂದಲೂ ತಿನ್ನುತ್ತಿದ್ದಾನೆ. ಆರಂಭದಲ್ಲಿ ಮಾಂಸವನ್ನು ಹಸಿ ತಿಂದಂತೆ ಮೀನನ್ನೂ ಹಸಿಯಾಗಿಯೇ ತಿನ್ನುತ್ತಿದ್ದ. ಆದಿ ಮಾನವನ ಆಹಾರವು ಬೇಟೆ ಮತ್ತು ಪ್ರಕೃತಿಯಲ್ಲಿ ನೇರ ತಿನ್ನಲು ಸಿಗುವ ವಸ್ತುಗಳನ್ನು ಒಳಗೊಂಡಿತ್ತು. ಬೇಟೆಯಲ್ಲಿ ಒಂದು ನೆಲ ಬೇಟೆ ಮತ್ತಿನ್ನೊಂದು ಜಲ ಬೇಟೆ. ನೀರಿನ ಬೇಟೆಯು ಮೀನನ್ನು ಹಿಡಿಯುವುದೇ ಆಗಿದೆ. ಇತಿಹಾಸ ಪೂರ್ವ ಮಾನವನ ದಿನವೂ ಆಹಾರಕ್ಕಾಗಿ ಅಲೆದಾಟ ಕೊನೆಗೆ ವಿಶ್ರಾಂತಿ ಹಾಗೂ ಗುಂಪು ರಕ್ಷಣೆಯ ಹೊರತು ಬೇರೆ ಯಾವ ವಿಷಯವನ್ನೂ ಒಳಗೊಂಡಿರಲಿಲ್ಲ.


ಮಾನವಿಕ ಅಧ್ಯಯನದ ಪ್ರಕಾರ ನೀರಿನಲ್ಲಿ ಮೀನು ಹಿಡಿಯುವುದಕ್ಕಿಂತ ಹೆಚ್ಚಾಗಿ ಆರಂಭದಲ್ಲಿ ಸುಲಭವಾಗಿ ಹೆಕ್ಕಲು ಸಿಕ್ಕುವ ಚಿಪ್ಪುಗಳನ್ನು ಎಂದರೆ ಕೊಯ್ಯೊಲು, ಮರುವಾಯಿ ಮೊದಲಾದವುಗಳನ್ನು ಆದಿ ಮಾನವರು ಆರಿಸಿ ತಿಂದರು. ತೊರೆ, ಕೆರೆಗಳು ಬತ್ತುವ ಹಂತದಲ್ಲಿ ಮೀನು ಹಿಡಿದುಕೊಂಡರು. ಯಾಕೆಂದರೆ ಆಗ ಗಾಳ, ಬಲೆ, ಆಯುಧ ಯಾವುದನ್ನೂ ಅವರು ಹೊಂದಿರಲಿಲ್ಲ. ನಿಧಾನವಾಗಿ ಅವರು ನೀರಲ್ಲಿ ಈಜಾಡುವ ಮೀನುಗಳನ್ನೂ ಹಿಡಿಯುವ ಹಲವಾರು ತಂತ್ರಗಳನ್ನು ಅಳವಡಿಸಿಕೊಂಡರು.


ಬಡಗಣ ನಾರ್ವೆಯ 7,000 ವರುಷಗಳಿಗೂ ಹಿಂದಿನ ಗವಿಯ ಕಲ್ಲ ಮೇಲಿನ ಚಿತ್ರಗಳಲ್ಲಿ ಮೀನು ಹಿಡಿಯುವ ಚಿತ್ರಗಳು ಇವೆ. ಕೆಲವು ಪಳೆಯುಳಿಕೆಗಳ ಆಧಾರದಿಂದ 20 ಲಕ್ಷ ವರುಷಗಳ ಹಿಂದೆ ಕೆನ್ಯಾದಲ್ಲಿ ಹೋಮಿನಿನ್ ಮಾನವರು ಕ್ಯಾಟ್ ಫಿಶ್ ಇಲ್ಲವೇ ಮೀಸೆ ಮೀನನ್ನು ಹಿಡಿದು ತಿಂದು ಮುಳ್ಳು ಬಿಟ್ಟಿದ್ದಾರೆ. 8 ಲಕ್ಷ ವರುಷಗಳ ಹಿಂದೆ ಇಸ್ರೇಲಿನಲ್ಲಿ ಹೋಮಿನಿನ್ ಆದಿ ಮನುಜರು ದೊಡ್ಡ ಮೀನೊಂದನ್ನು ಬೆಂಕಿಯ ಮೇಲೆ ಹಿಡಿದು ಸುಟ್ಟು ತಿಂದಿದ್ದಾರೆ.


ನೀರಿನ ಚಿಪ್ಪು ಜೀವಿಗಳನ್ನು ತಿನ್ನುವುದು ವ್ಯಾಪಕವಾಗಿತ್ತು. ನಿಯಾಂಡ್ರತಾಲ್ ಮಾನವರು ಮರುವಾಯಿ, ಶಂಕು ಮೀನುಗಳನ್ನು ಹೆಕ್ಕಲು ನೀರಿಗೆ ಹಾರುತ್ತಿದ್ದುದು ತಿಳಿದು ಬಂದಿದೆ. ಮೀನುಗಳಲ್ಲಿ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವೆ. ಆದರೆ ನೀರಿನ ಹಾವಸೆಗಳನ್ನು ಕಣ ಸಸ್ಯಗಳನ್ನು ತಿಂದೇ ಬದುಕುವ ಮೀನುಗಳು ತುಂಬ ಇವೆ. ಮುಖ್ಯವಾಗಿ ಉಷ್ಣ ವಲಯ ಪ್ರದೇಶದ ಮೀನುಗಳಲ್ಲಿ 20 ಶೇಕಡಾ ಜಾತಿಯವು ಮತ್ತು 50 ಶೇಕಡಾ ಒಟ್ಟಾರೆ ಮೀನುಗಳು ಅಲ್ಗೆ ಅರ್ಥಾತ್ ಪಾಚಿ ತಿಂದು ಬದುಕುತ್ತವೆ.


ಎರೆಹುಳು, ಸ್ಲಡ್ಜ್‍ಹುಳು, ನೀರ ಮೇಲಿನ ಸಣ್ಣ ಕೀಟ ಮತ್ತು ನುಸಿ, ನೊಣಗಳು ಮೊದಲಾದವನ್ನು ಮೀನುಗಳು ತಿನ್ನುತ್ತವೆ. ಬೇರೆ ಮೀನುಗಳ ಮೊಟ್ಟೆ ಲಾರ್ವಾಗಳನ್ನು ಮತ್ತು ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗುವುದು ಮಾಮಾಲು. ಏಡಿಗಳು ಕಪ್ಪೆ ಚಿಪ್ಪುಗಳನ್ನು ಬಲವಂತದಿಂದ ತೆಗೆÀದು ತಿನ್ನುವುದು ಮೊದಲಾದ ಚೋದ್ಯಗಳು ನೀರಲ್ಲಿ ನಡೆಯುತ್ತವೆ. ಆ ಎಲ್ಲ ಮೀನುಗಳನ್ನು ಮತ್ತು ಚಿಪ್ಪು ಜೀವಿಗಳನ್ನು ಮಾನವರು ತಿಂದು ತೇಗುತ್ತಾರೆ. ಅಲ್ಲದೆ ಒಂದೆಡೆ ತಿನ್ನುವ ಕೆಲವನ್ನು ಇನ್ನೊಂದೆಡೆಯ ಜನರು ತಿನ್ನದಿರುವುದೂ ಇದೆ. ಇದು ನೀರಿನ ಜೀವಿಗಳಿಗೆ ಸಂಬಂದಿಸಿದಂತೆಯೂ ಇದೆ.


ದಕ್ಷಿಣ ಕನ್ನಡ ಮೀನುಗಾರಿಕಾ ಇಲಾಖೆಯ ಅಂಕಿ ಅಂಶದಂತೆ ಕಳೆದ ವರುಷದ ಏಪ್ರಿಲ್‍ನಿಂದ ಈ ವರುಷದ ಮಾರ್ಚ್ ಅಂತ್ಯದವರೆಗಿನ ಆರ್ಥಿಕ ವರುಷದಲ್ಲಿ 2021-22ರಲ್ಲಿ 2,91,812 ಟನ್, 2022-23ರಲ್ಲಿ 3,33,557 ಟನ್ 2023-24ರಲ್ಲಿ 1,89,924 ಟನ್ ಕಡಲುಗಳಿಂದ ಮೀನು ಹಿಡಿಯಲಾಗಿದೆ. ಕಳೆದ ಹಣಕಾಸು ವರುಷದಲ್ಲಿ ಹೆಚ್ಚಿನ ಮೀನುಗಾರಿಕೆ ಆಗಿದೆ. ಅದರ ಹಿಂದಿನ ವರುಷವೂ ಭಾರೀ ಕೊರತೆ ಇರಲಿಲ್ಲ. ಆದರೆ ಮುಗಿದಿರುವ ಹಣಕಾಸು ವರುಷದಲ್ಲಿ ತುಂಬ ಕಡಿಮೆ ಮೀನುಗಾರಿಕೆ ನಡೆದಿದೆ. ಮುಂದಿನ ಆರ್ಥಿಕ ವರುಷದ ಮೊದಲ ತಿಂಗಳಲ್ಲೇ ತುಂಬ ಕಡಿಮೆ ಮೀನು ಸಿಕ್ಕಿದೆ. ಮೀನಿನ ಕೊರತೆಯು ಮೀನಿನ ಬೆಲೆ ಏರಿಕೆಗೆ ಕಾರಣವಾದರೂ ಬೋಟಿನವರಿಗೆ ಭಾರೀ ಆದಾಯ ಸಿಕ್ಕಿಲ್ಲ. ಮೀನು ಗ್ರಾಹಕರಿಗೆ ತುಂಬ ಹೊರೆಯಾಗಿ ಪರಿಣಮಿಸಿದೆ.


ನಮ್ಮ ಪೂರ್ವಜರಾದ ಹೋಮೋ ಎರೆಕ್ಟಸ್ ಜನರು ಮೀನುಗಳನ್ನು ಮೊದಲು ಮಸಾಲೆಗಳೊಂದಿಗೆ ಬೆರೆಸಿರಬಹುದು ಎನ್ನುತ್ತಾರೆ ಕೆಲವು ಸಂಶೋಧಕರು. ಈಗಂತೂ ಮೀನುಗಳನ್ನು ಸಾಕಲು ಜನರೇ ಮೀನಿನ ಆಹಾರಗಳನ್ನು ತಯಾರಿಸುತ್ತಾರೆ. ಗೋಧಿ, ಮೆಕ್ಕೆ ಜೋಳದೊಂದಿಗೆ ಮೀನುಗಳಿಗೆ ಅಗತ್ಯದ ಪೌಷ್ಟಿಕ ಅಂಶಗಳು, ವಿಟಮಿನ್‍ಗಳು ಮೊದಲಾದವನ್ನು ಸೇರಿಸಿ ಮೀನು ಸಾಕಲು ಅಗತ್ಯದ ಮೀನಿನ ಆಹಾರಗಳನ್ನು ತಯಾರಿಸುತ್ತಾರೆ. ಇಂದೆಲ್ಲ ಸಿಹಿ ನೀರಿನ ಒಳನಾಡು ಮೀನುಗಾರಿಕೆ ಹೆಚ್ಚು ಫಲಪ್ರದವಾಗಿ ಯಶಸ್ಸು ಕಾಣುತ್ತಿದೆ.


ಜಾಗತಿಕವಾಗಿ ಮೀನು ಸಂತತಿ ಕಡಿಮೆ ಆಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಬಗೆಗೆ ವಿಶ್ವ ಆಹಾರ ಸಂಸ್ಥೆಯು ಎರಡು ದಶಕಗಳಷ್ಟು ಹಿಂದೆಯೇ ಎಚ್ಚರಿಸಿದೆ. ಜಾಗತಿಕ ಜನಸಂಖ್ಯಾ ಸ್ಫೋಟದ ಕಾರಣದಿಂದಾಗಿ ಅತಿ ಮೀನುಗಾರಿಕೆಯು ಇಂದು ಎಲ್ಲ ಕಡೆ ನಡೆಯುತ್ತಿದೆ. ಅಲ್ಲದೆ ಆಧುನಿಕ ರೀತಿಯಲ್ಲಿ ಹೆಚ್ಚು ಮೀನು ಹಿಡಿಯುವ ತಂತ್ರಗಾರಿಕೆಗಳು ಕೂಡ ಎಲ್ಲ ಕಡೆ ಕಂಡುಬಂದಿವೆ. ಮೀನುಗಾರಿಕಾ ದೋಣಿಗಳಲ್ಲಿ ಸುಧಾರಣೆ, ಮೀನು ಹಿಡಿಯುವ ಬಲೆಗಳಲ್ಲಿ ಸುಧಾರಣೆ ಎಂದು ಹೆಚ್ಚೆಚ್ಚು ಜಾಗತಿಕವಾಗಿ ಮೀನು ಹಿಡಿಯುವುದು ದಶಕದಿಂದ ನಡೆಯುತ್ತಿದೆ.


ಮೀನುಗಳ ಮೊಟ್ಟೆ ನಾಶ, ಮರಿಗಳ ನಾಶ ಮೀನುಗಾರಿಕೆಗೆ ಬಡಿದಿರುವ ದೊಡ್ಡ ಶಾಪವಾಗಿದೆ. ಮಾನವನ ಆರೋಗ್ಯದಲ್ಲಿ ಮೀನಿನ ಪಾಲು ಕೂಡ ಪ್ರಾಮುಖ್ಯವಾದುದು. ಆಹಾರದಲ್ಲೂ ಆ ವಿಷಯ ಮುಖ್ಯವಾದುದಾಗಿದೆ. ಲೋಕದಲ್ಲಿ ಮಾಂಸಾಹಾರಿಗಳ ಸಂಖ್ಯೆಯೇ ಹೆಚ್ಚು. ಅಷ್ಟೇ ಸಂಖ್ಯಾ ಬಲದ್ದಾಗಿದೆ ಮೀನು ಆಹಾರ ಸೇವಿಸುವವರ ಸಂಖ್ಯೆ. ಜಗತ್ತಿನಲ್ಲಿ ಸಸ್ಯಾಹಾರಿಗಳ ಸಂಖ್ಯೆ ತುಂಬ ಕಡಿಮೆ. ಮೀನು, ಮಾಂಸ ಕಡಿಮೆಯಾಗಿ ಹೆಚ್ಚು ಸಸ್ಯಾಹಾರ ಸೇವನೆ ಎಂದರೆ ಆಹಾರದ ಅಸಮತೋಲನ ಎಲ್ಲ ಕಡೆ ಕಾಣಿಸಿಕೊಳ್ಳುತ್ತದೆ ಮತ್ತು ಎಲ್ಲರಿಗೂ ಆಹಾರ ಭದ್ರತೆ ಒದಗಿಸಲು ಅಸಾಧ್ಯ ಎಂಬಂತಾ ಸ್ಥಿತಿಯು ಎಲ್ಲ ಕಡೆ ಉಂಟಾಗುತ್ತದೆ.

Related Posts

Leave a Reply

Your email address will not be published.