ಜನರು ಮಾರಕ ಕಾಯಿಲೆಗೆ ಬಲಿಯಾಗುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಲಿ:ಬಿ.ಎಂ. ಭಟ್

ಮಳೆಗಾಲದಲ್ಲಿ ಕೊಳಚೆ ಪ್ರದೇಶದ ಸ್ವಚ್ಚತೆ, ವೈರಸ್ ಉತ್ಪತ್ತಿ ಆಗುವ ಪ್ರದೇಶಗಳ ಗುರುತಿಸಿ ಕ್ರಿಮಿನಾಶಕ ಸಿಂಪಡಿಸುವುದು ಸೇರಿದಂತೆ ಜನರ ಆರೋಗ್ಯ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಯಾವುದೇ ರೋಗ ಹರಡದಂತೆ ರಕ್ಷಣೆ ಒದಗಿಸಬೇಕಾದ್ದು ಸರಕಾರದ, ಆರೋಗ್ಯ ಇಲಾಖೆಯ ಕರ್ತವ್ಯವಾಗಿದೆ. ಆದರೆ ಆರೋಗ್ಯ ಇಲಾಖೆ ಏನು ಮಾಡುತ್ತಿದೆ ಜನ ಡೆಂಗ್ಯೂ ಮೊದಲಾದ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಸಿಪಿಐಎಂ ಮುಖಂಡ ಬಿ.ಎಂ.ಭಟ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಜಿಲ್ಲೆಗೆ 8 ಜನ ಶಾಸಕರಿದ್ದರೂ ಜನರ ಆರೋಗ್ಯ ಬಗ್ಗೆ ಯಾವುದೇ ಕಾಳಜಿ ಇಲ್ಲದವರಾಗಿದ್ದಾರೆ. ಲಾಭದಾಯಕ ದೃಷ್ಟಿಕೋನದ ಮನೋಭಾವ ಹೊಂದಿದ ಸರಕಾರ, ಜನಪ್ರತಿನಿದಿಗಳು ಇಂದು ಸೇವಾ ಮನೋಭಾವವನ್ನು ಕಳಚಿ ಕೊಂಡಿದ್ದಾರೆಯೇ ? ಜನರ ಆರೋಗ್ಯ ರಕ್ಷಣೆಯಲ್ಲೂ ಲಾಭದ ಲೆಕ್ಕಚಾರ ನೋಡುವುದು ಜನರ ಜೀವದ ಮೇಲೆ ಆಟ ಆಡಿದಂತಾದೀತು ಎಂದರು. ಈ ಬಗ್ಗೆ ಸರಕಾರ ತಕ್ಷಣ ಕಠಿಣ ಕ್ರಮ ಕೈಗೊಂಡು ಔಷದಿ ಸಿಂಪಡಿಕೆಯೂ ಸೇರಿದಂತೆ ರೋಗ ಉತ್ಪತ್ತಿ ಮತ್ತು ಹರಡುವಿಕೆಯನ್ನು ತಡೆಯಲು ಮುಂದಾಗದಿದ್ದರೆ ನಾವು ಜಿಲ್ಲಾ ಆರೋಗ್ಯ ಇಲಾಖೆಯ ಎದುರು ಸಮರ ದೀರ ಹೋರಾಟ ನಡೆಸಬೇಕಾಗುತ್ತದೆ ಎಂದವರು ಆರೋಗ್ಯ ಇಲಾಖೆಯನ್ನು ಎಚ್ಚರಿಸಿದರು.