ಹೆಜಮಾಡಿಯಲ್ಲಿ ಟೋಲ್ ಹೆಚ್ಚಿಸುವ ದುಸ್ಸಾಹಸ ಮಾಡಬೇಡಿ : ವಿನಯ ಕುಮಾರ್ ಸೊರಕೆ

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವುದು ಸರಿಯಾದ ಕ್ರಮ. ಇದು ಜನತೆ ನಡೆಸಿದ ಅವಿರತ ಹೋರಾಟದ ಫಲ. ಆದರೆ ವಿಲೀನದ ಹೆಸರಿನಲ್ಲಿ ಹೆಜಮಾಡಿಯಲ್ಲಿ ಸುಂಕ ಹೆಚ್ಚಿಸುವ ದುಸ್ಸಾಹಸ ಮಾಡಿದರೆ ಹೋರಾಟ ಹೊಸ ತಿರುವು ಪಡೆದುಕೊಳ್ಳಲಿದೆ. ಎರಡೂ ಜಿಲ್ಲೆಯ ಜನರನ್ನು ಸಂಘಟಿಸಿ ಬಿಜೆಪಿಯ ದುರಾಡಳಿತವನ್ನು ಕೊನೆಗೊಳಿಸಲಾಗುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಟೋಲ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯ ಇಪ್ಪತ್ತ ಮೂರನೇ ದಿನದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಸರಕಾರದ ನೋಟಿಫಿಕೇಷನ್ ಹೊರಟು ಐದು ದಿನಗಳು ದಾಟಿದರು ಟೋಲ್ ಸುಲಿಗೆ ನಿಂತಿಲ್ಲ. ಅಸಮರ್ಥರು, ಜನಪೀಡಕರು ಜನ ಪ್ರತಿನಿಧಿಗಳಾಗಿರುವ ಪರಿಣಾಮ ಇದು. ಸುರತ್ಕಲ್ ಟೋಲ್ ಗೇಟ್ ತೆರವು ಆದೇಶ ಜಾರಿಗೆ ಹಿಂದೇಟು ಹಾಕಿದರೆ ಜಿಲ್ಲೆಯ ಮೂಲೆ ಮೂಲೆಗಳಿಂದ ಟೋಲ್ ಗೇಟ್ ಗೆ ಪಾದಯಾತ್ರೆ ಹೊರಡಿಸಲಾಗುವುದು. ಅದು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ನೆಲ ಕಚ್ಚಿಸಲಿದೆ ಎಂದು ಹೇಳಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಉಪ ಮೇಯರ್ ಗಳಾದ ಮುಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಪೊರೇಟರ್ ಆಯಾಝ್ ಕೃಷ್ಣಾಪುರ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಬ್ದುಲ್ ತಯ್ಯೂಬ್, ಸಾದಿಕ್ ಬೆಂಗ್ರೆ, ಸಾವಲ್, ಫಹದ್ ಬೆಂಗ್ರೆ, ಡಿವೈಎಫ್ಐ ಬೆಂಗ್ರೆ ಘಟಕದ ಹಸನ್ ಮುವಾಝ್, ಹನೀಫ್, ಪಿ ಜಿ ರಫೀಕ್, ಸಾಮಾಜಿಕ ಮುಖಂಡರಾದ ವೈ ರಾಘವೇಂದ್ರ ರಾವ್, ಹಸನಬ್ಬ ಮಂಗಳಪೇಟೆ, ಆನಂದ ಅಮೀನ್, ಪ್ರಮೀಳಾ ಶಕ್ತಿನಗರ, ಸಮರ್ಥ್ ಭಟ್, ಮಕ್ಸೂದ್ ಬಿ ಕೆ ಮತ್ತಿತರರು ಉಪಸ್ಥಿತರಿದ್ದರು‌.

23 ನೇ ದಿನದ ಧರಣಿಯ ನೇತೃತ್ವವನ್ನು ಕಸಬಾ ಬೆಂಗ್ರೆ ಗ್ರಾಮಸ್ಥರು ವಹಿಸಿದ್ದರು.

Related Posts

Leave a Reply

Your email address will not be published.