ಕಾಪು: ದರೋಡೆಗೆ ಹೊಂಚು ಹಾಕುತ್ತಿದ್ದ ಆರು ಮಂದಿ ಪೊಲೀಸ್ ವಶಕ್ಕೆ

ದರೋಡೆಗೆ ಹೊಂಚು ಹಾಕಿ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕಾರ್ಫಿಯೋ ಕಾರಿನಲ್ಲಿ ಸಂಚರಿಸುತ್ತಿದ್ದ  ತಂಡವೊಂದನ್ನು  ಕಾಪು ಪೊಲೀಸರು ಶನಿವಾರ ರಾತ್ರಿ ಬಂದಿಸಿದ್ದಾರೆ.

ರಾ.ಹೆ.66ರ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರಿಗೆ ತಡೆಯೊಡ್ಡಿದ ಪೊಲೀಸರು ಆರೋಪಿಗಳಾದ ಅಮಿತ್ ರಾಜ್, ಪ್ರಕಾಶ್  ಸುರತ್ಕಲ್, ವರುಣ್ ನೀರುಮಾರ್ಗ, ಕಾರ್ತಿಕ್ ಶೆಟ್ಟಿ ಸುರತ್ಕಲ್, ಅಭಿಷೇಕ್, ಶ್ರೀಕಾಂತ್ ಶ್ರೀಪತಿ ಪರಂಗಿಪೇಟೆ ಎಂಬವರನ್ನು ಬಂದಿಸಿದ್ದಾರೆ. ಇವರಲ್ಲಿ ಕೆಲವರು ಬೇರೆ ಬೇರೆ ಠಾಣೆಗಳಲ್ಲಿ ರೌಡಿ ಶೀಟರ್ ಹೊಂದಿದವರಾಗಿದ್ದಾರೆ.

ಉಡುಪಿಯಿಂದ ಕಾಪು‌ ಕಡೆಗೆ ಬರುತ್ತಿದ್ದ ಕಾಪು‌ ಸಿಐ ಜಯಶ್ರೀ ಮಾನೆ ಅವರು ಉದ್ಯಾವರ ಸೇತುವೆ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಸ್ಕಾರ್ಪಿಯೋ ಕಾರೊಂದು ನಿಂತಿರುವುದನ್ನು ಗಮನಿಸಿದ್ದರು. ಕೂಡಲೇ ಸ್ಕಾರ್ಪಿಯೋ ಬಳಿಗೆ ಬಂದು ನಿಲ್ಲಿಸಲು ಯತ್ನಿಸಿದಾಗ ಆರೋಪಿಗಳು ಕಾರನ್ನು ಪ್ರಾಣಕ್ಕೆ ಮಾರಕವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕಾಪು ಕಡೆಗೆ ತೆರಳಿದ್ದರು.

ಅವರು ತತ್ ಕ್ಷಣ ಈ ಬಗ್ಗೆ ಕಾಪು ಮತ್ತು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕಾಪು ಎಸ್ಸೈ  ಅಬ್ದುಲ್ ಖಾದರ್ ನೇತೃತ್ವದ ತಂಡ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.

ಸ್ಕಾರ್ಪಿಯೋ ಕಾರ್ ನಲ್ಲಿ ಡ್ರ್ಯಾಗನ್, ಚೂರಿ, ಕಬ್ಬಿಣದ ಪೈಪ್ ಮತ್ತು ಮರಳು ಮಿಶ್ರಿತ ಮೆಣಸಿನ ಪುಡಿಯನ್ನು ಪತ್ತೆ ಹಚ್ಚಿದ್ದಾರೆ. ಇತ್ತೀಚಿನ ಕೆಲ ದಿನಗಳಿಂದ ಅವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಪೊಲೀಸರ ನಿದ್ದೆಗೆಡಿಸುತ್ತಿದೆ. ಆ ನಿಟ್ಟಿನಲ್ಲಿ   ಪೊಲೀಸರು ಆರೋಪಿಗಳನ್ನು  ಮತ್ತಷ್ಟು  ಕಠಿಣವಾಗಿ ವಿಚಾರಣೆಗೊಳ ಪಡಿಸುವ ಸಾಧ್ಯತೆ ಇದೆ.

Related Posts

Leave a Reply

Your email address will not be published.