ಕಾರ್ಕಳದ ಕ್ರೈಸ್ಟ್‌ಕಿಂಗ್ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ-v4 ನ್ಯೂಸ್ ವಾಹಿನಿಯ ಪತ್ರಕರ್ತ ಖಲೀಲ್ ಅವರಿಗೆ ಸನ್ಮಾನ

ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಹಾಗೂ ಕೃಷಿಬಿಂಬ ಪತ್ರಿಕೆಯ ಸಂಪಾದಕರಾದ ರಾಧಾಕೃಷ್ಣ ತೋಡಿಕಾನ ಅವರು ಆಗಮಿಸಿದ್ದು, ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಿಂದಾಗಿ ಇಂದು ಸಮಾಜದಲ್ಲಿ ಜಾಗೃತಿ ಮೂಡಲು ಸಾಧ್ಯವಾಗಿದೆ. ಪತ್ರಿಕೆಗಳು ಸಮಾಜ, ಆಡಳಿತ ವ್ಯವಸ್ಥೆ ಹಾಗೂ ಜನರ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ “ಪತ್ರಿಕೆಗಳು ಹಾಗೂ ಸುದ್ದಿ ಮಾಧ್ಯಮಗಳು ಸಮಾಜದ ಮಾನಸಿಕ ಸ್ವಾಸ್ಥ್ಯ ಕಾಪಾಡುವಂತಹ ಅಮೋಘ ಕಾರ್ಯವನ್ನು ಮಾಡುತ್ತಿವೆ. ಸಮಾಜದ ಏಳ್ಗೆಗಾಗಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಮಕ್ಕಳ ಮುಂದೆ ತೆರೆದಿಡುವ ಪ್ರಯತ್ನವಾಗಿ ಹಾಗೂ ಪತ್ರಿಕಾ ರಂಗದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ಪ್ರತೀ ವರ್ಷ ಪತ್ರಿಕಾ ದಿನಾಚರಣೆ ನಡೆಸಿಕೊಂಡು ಬರುತ್ತಿದೆ ಎಂದರು.

ಈ ಸಂದರ್ಭದಲ್ಲಿ v4 ನ್ಯೂಸ್‌ನ ಹಿರಿಯ ವರದಿಗಾರ ಹಾಗೂ ಛಾಯಾಗ್ರಾಹಕ ಕೆ.ಮೊಹಮ್ಮದ್ ಖಲೀಲ್ ಅವರನ್ನು ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಮೊಹಮ್ಮದ್ ಖಲೀಲ್ ಅವರು ತಮ್ಮ ವರದಿಗಾರಿಕೆಯ ಅನುಭವವನ್ನು ಹಂಚಿಕೊಂಡರು.

ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್ ಅವರು ಪ್ರಸ್ತಾವನೆಗೈದರು. ಈ ಸಂದರ್ಭದಲ್ಲಿ ಹಾಜರಿದ್ದ ವಿವಿಧ ಪತ್ರಿಕೆಗಳ ಪತ್ರಕರ್ತರು, ವರದಿಗಾರರು, ಛಾಯಾಗ್ರಾಹಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕಿಶೋರ್ ರುಡಾಲ್ಫ್ ಲೋಬೊ, ಆಡಳಿತಾಧಿಕಾರಿ ವಿನಯ್ ಕುಮಾರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಸ್ವಾಗತಿಸಿ ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

add - Rai's spices

Related Posts

Leave a Reply

Your email address will not be published.