ಕೂಳೂರಿನ ಫಲ್ಗುಣಿ ನದಿಯಲ್ಲಿ ತ್ಯಾಜ್ಯಗಳ ರಾಶಿ

ಕರಾವಳಿಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಉಕ್ಕೇರಿದ ಮಂಗಳೂರು ನಗರದ ಫಲ್ಗುಣಿ ನದಿಯಲ್ಲಿ ರಾಶಿ ರಾಶಿ ತ್ಯಾಜ್ಯ ಜಮಾವಣೆಗೊಂಡಿದೆ. ಕೂಳೂರಿನ ನದಿಯ ಬದಿಯಲ್ಲಿ ಲೋಡುಗಟ್ಟಲೆ ಕಸದ ರಾಶಿ ಬಿದ್ದಿದ್ದು, ಫಲ್ಗುಣಿ ನದಿಯ ದುಸ್ಥಿತಿಯನ್ನು ಹೇಳತೀರದಂತಿದೆ.
ಕರಾವಳಿಯ ಜೀವನದಿ ಫಲ್ಗುಣಿ ನದಿಯಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿದೆ. ಇತ್ತಿಚೆಗೆ ಸುರಿದ ವಿಪರೀತ ಮಳೆಯ ಬಳಿಕ ಕೂಳೂರಿನ ಫಲ್ಗುಣಿ ನದಿಯ ಬದಿಯಲ್ಲಿ ಟನ್ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಸಂಗ್ರಹಗೊಂಡಿವೆ. ನೆರೆಯಲ್ಲಿ ರೋಡು, ತೋಡು, ಜನವಸತಿ ಪ್ರದೇಶಗಳಿಂದ ಅಗಾಧ ಪ್ರಮಾಣದ ತ್ಯಾಜ್ಯ ನದಿಯೊಡಲು ಸೇರಿದೆ.

ಇವುಗಳಲ್ಲಿ ಲೋಡುಗಟ್ಟಲೆ ಪ್ಯಾಂಪರ್ಸ್, ಪ್ಯಾಡ್, ಲಿಕ್ಕರ್ ಬಾಟಲಿಗಳು, ನೀರಿನ ಬಾಟಲಿಗಳು, ಇನ್ನಿತರ ಪ್ಲಾಸ್ಟಿಕ್ ಗಳು ಸೇರಿದಂತೆ ಅಗಾಧ ಪ್ರಮಾಣದ ತ್ಯಾಜ್ಯ ನಗರದ ಕೂಳೂರು ಪರಿಸರದ ಫಲ್ಗುಣಿ ನದಿ ತೀರದಲ್ಲಿ ಜಮಾವಣೆಯಾಗಿವೆ.

ಈ ತ್ಯಾಜ್ಯ ರಾಶಿಯನ್ನು ನದಿಯೊಡಲಿನಿಂದ ಮೇಲೆತ್ತಲು ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ ಅವರ ಮುಂದಾಳತ್ವದಲ್ಲಿ ಸ್ಕೂಲ್ ಆಫ್ ರೋಶನಿ ನಿಲಯ, ಸಿಒಡಿಪಿ ವಿದ್ಯಾರ್ಥಿಗಳ ಸಹಿತ 27 ಮಂದಿಯ ತಂಡ ಶ್ರಮವಹಿಸಿದ್ದಾರೆ. ಆದ್ರೂ ಇನ್ನು ಕೂಡ ತ್ಯಾಜ್ಯ ರಾಶಿ ಮುಗಿಯುವಂತೆ ಕಾಣುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
