ಅಜೆಕಾರು , ಜು. 5: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ, ಕಾರ್ಕಳ ವಲಯದ ವತಿಯಿಂದ ಅಜೆಕಾರು ಕೈಕಂಬದ ಶ್ರೀ ಮಹಾದೇವಿ ಭಜನಾ ಮಂಡಳಿ (ರಿ.) ಮಹಿಳಾ ಸದಸ್ಯರಿಗಾಗಿ ಕಾನೂನು ಮಾಹಿತಿ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ನ್ಯಾಯವಾದಿಗಳು ಹಾಗೂ ಕಾರ್ಕಳ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪದ್ಮಪ್ರಸಾದ್ ಜೈನ್ ಅವರು ಮಹಿಳೆಯರ ಹಕ್ಕುಗಳು, ಕುಟುಂಬ ಸಂಬಂಧಿತ ಕಾನೂನುಗಳು, ಸೈಬರ್ ಅಪರಾಧಗಳು, ಆಸ್ತಿ ಹಕ್ಕು, ಮಹಿಳಾ ಸುರಕ್ಷತೆ ಹಾಗೂ ಪ್ರಸ್ತುತ ಕಾನೂನುಗಳ ಕುರಿತು ಸರಳ ಹಾಗೂ ಪರಿಣಾಮಕಾರಿ ಮಾಹಿತಿಯನ್ನು ನೀಡಿ, ಕಾನೂನು ಅರಿವು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವೆ, ಕಾನೂನು ಜಾಗೃತಿ ಹಾಗೂ ಜನಸಾಮಾನ್ಯರಿಗೆ ಉಚಿತ ಕಾನೂನು ಮಾರ್ಗದರ್ಶನದ ಮೂಲಕ ಸಲ್ಲಿಸುತ್ತಿರುವ ಸಮಾಜಮುಖಿ ಸೇವೆಯನ್ನು ಪರಿಗಣಿಸಿ, ಶ್ರೀ ಪದ್ಮಪ್ರಸಾದ್ ಜೈನ್ ಅವರನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ ಉಪಾಧ್ಯಕ್ಷರಾದ ದೇವರಾಜ್ ಶೆಟ್ಟಿ, ಸುರತ್ಕಲ್ ಉದ್ಘಾಟಿಸಿ, ಕಾರ್ಕಳ ವಲಯವು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವುದನ್ನು ಶ್ಲಾಘಿಸಿದರು.
ಗೌರವ ಉಪಸ್ಥಿತರಾಗಿ ಶ್ರೀಮತಿ ಸುಮಿತ್ರಾ ಭಂಡಾರಿ, ಉಪಾಧ್ಯಕ್ಷರು, ಶ್ರೀ ಮಹಾದೇವಿ ಭಜನಾ ಮಂಡಳಿ, ಎಸ್. ಕೆ. ಪಿ. ಎ. ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಶ್ರೀ ಪದ್ಮಪ್ರಸಾದ್ ಜೈನ್, ಶ್ರೀ ರಾಘವೇಂದ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳು, ಶ್ರೀ ಮಹಾದೇವಿ ಭಜನಾ ಮಂಡಳಿ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್. ಕೆ. ಪಿ. ಎ. ಕೋಶಾಧಿಕಾರಿಗಳಾದ ಶ್ರೀ ವಿ. ಆರ್. ಸತೀಶ್ ಆಚಾರ್ಯ ಅವರು ನಿರೂಪಿಸಿದರು. ಎಸ್. ಕೆ. ಪಿ. ಎ. ಕಾರ್ಕಳ ವಲಯದ ಅಧ್ಯಕ್ಷರಾದ ಶ್ರೀ ಪ್ರಮೋದ್ ಚಂದ್ರ ಪೈ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶೇಖರ್ ಕುಕ್ಕುಜೆ ವಂದನಾರ್ಪಣೆ ಸಲ್ಲಿಸಿದರು.
ಶಿಬಿರದಲ್ಲಿ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾನೂನು ವಿಷಯಗಳ ಕುರಿತು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಕಾರ್ಯಕ್ರಮವು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ನಡೆಯಿತು.

