ಮಂಗಳೂರು: ತುಳುವಿನ ಮೊದಲ ಪ್ರಕಟಿತ ನಾಟಕ ಕೃತಿ ‘ಜನ ಮರ್ಲ್’ ನಾಟಕದ ಲೇಖಕ ಮಾಧವ ತಿಂಗಳಾಯರು, 30 ನಾಟಕಗಳನ್ನು ಬರೆದು ಸಾಹಿತ್ಯ ಸೇವೆಯ ಜೊತೆಗೆ ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಸುಧಾರಣೆಗೂ ಅನನ್ಯ ಸೇವೆ ಸಲ್ಲಿಸಿದವರು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಆಯೋಜಿಸಿದ್ದ ಮಾಧವ ತಿಂಗಳಾಯರ 113ನೇ ಜನ್ಮದಿನಾಚರಣೆಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಿ .ಕೃಷ್ಣಮೂರ್ತಿ ಅವರು ಮಾತನಾಡಿ, ತಿಂಗಳಾಯರ ಎಲ್ಲಾ ತುಳು ನಾಟಕಗಳು ವೈಚಾರಿಕ ಪ್ರಖರತೆಗಳಿಂದ ಕೂಡಿದ್ದವು. ಕನ್ನಡ ಸಾಹಿತ್ಯ ಲೋಕವು ಪ್ರಗತಿಶೀಲ ಕಾಲಘಟ್ಟದಲ್ಲಿ ಮುನ್ನಡೆಯುವ ಸಂದರ್ಭದಲ್ಲಿ ಪ್ರಗತಿಶೀಲ ಆಶಯದ ಕನ್ನಡ ನಾಟಕವನ್ನು ಕೂಡ ಮಾಧವ ತಿಂಗಳಾಯರು ರಚಿಸಿದ್ದರು ಎಂದು ಹೇಳಿದರು.

ರಂಗ ನಿರ್ದೇಶಕರಾದ ಜಗನ್ ಪವಾರ್ ಬೇಕಲ್ ಅವರು ಮಾತನಾಡಿ, ಮಾಧವ ತಿಂಗಳಾಯರ ಮಾವ, ಅಜ್ಜ ಸೇರಿದಂತೆ ಪೂರ್ತಿ ಕುಟುಂಬ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದು ನೆನಪಿಸಿದರು.
ಹಿರಿಯ ರಂಗ ನಿರ್ದೇಶಕರಾದ ತಮ್ಮ ಲಕ್ಷ್ಮಣ ಅವರು ಮಾತನಾಡಿ, ತುಳು ನಾಟಕದ ಆದ್ಯ ಪ್ರವರ್ತಕರಾದ ಮಾಧವ ತಿಂಗಳಾಯರ ನೆನಪಿನಲ್ಲಿ ‘ತುಳು ರಂಗಭೂಮಿ ದಿನಾಚರಣೆ’ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಿಂಗಳಾಯರ ಕುಟುಂಬಸ್ಥರಾದ ಪ್ರೇಮಚಂದ್ರ ತಿಂಗಳಾಯರು ಭಾಗವಹಿಸಿ ಮಾಧವ ತಿಂಗಳಾಯರ ಸಾಮಾಜಿಕ ಮತ್ತು ಸಾಹಿತ್ಯಿಕ ಕೆಲಸಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ತುಳು ಪರಿಷತ್ತಿನ ಅಧ್ಯಕ್ಷ ಶುಭೋದಯ ಆಳ್ವ, ದುರ್ಗಾ ಪ್ರಸಾದ್, ಹೊನ್ನಯ್ಯ, ಪತ್ರಕರ್ತರಾದ ರಮೇಶ್ ಮಂಜೇಶ್ವರ, ಪ್ರಕಾಶ್ ಪುತ್ತೂರು, ಸಂಗೀತ ಕಲಾವಿದರಾದ ರತ್ನಾವತಿ ಜೆ. ಬೈಕಾಡಿ, ನಾದ ಮಣಿನಾಲ್ಕೂರು, ಲೇಖಕಿ ರೂಪಕಲಾ ಆಳ್ವ, ಸಂಕೇತದ ಅಧ್ಯಕ್ಷ ಹರೀಶ್ ಶಕ್ತಿ ನಗರ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ರಘು ಇಡ್ಕಿದು ವಂದಿಸಿದರು.


