ಕಸ ವಿಲೇವಾರಿ ಚಾಲಕರ ಸೇವೆಯನ್ನು ಟೆಂಡರ್‍ಗೆ ವಹಿಸದಂತೆ ಆಗ್ರಹ : ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಒತ್ತಾಯ

ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ಚಾಲಕರ ಸೇವೆಯನ್ನು ಮರಳಿ ಟೆಂಡರ್‍ಗೆ ವಹಿಸದಂತೆ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘ ಹಾಗೂ ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣ ಗೌಡ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಧಾರದಲ್ಲಿ ದುಡಿಯುತ್ತಿರುವ ಸ್ವಚ್ಛತಾ ವಾಹನ ಚಾಲಕರನ್ನು ಗುತ್ತಿಗೆ ಪದ್ಧತಿಯಿಂದ ಕೈಬಿಟ್ಟು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿ ಮಾಡುವಂತೆ ಸಂಘವು ರಾಜ್ಯಾದ್ಯಾಂತ ಹೋರಾಟ ರೂಪಿಸಿತ್ತು. ಈ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಸ್ವಚ್ಛತೆಯಲ್ಲಿ ತೊಡಗಿರುವ ವಾಹನ ಚಾಲಕರು, ಯುಜಿಡಿ ಕಾರ್ಮಿಕರನ್ನು ನೇರ ಪಾವತಿಗೆ ತರುವುದಾಗಿ ನಿರ್ಣಯ ಕೈಗೊಂಡಿತ್ತು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಹೀಗಿರುವಾಗ ಮಂಗಳೂರು ನಗರ ಪಾಲಿಕೆ ಸ್ವಚ್ಛತಾ ವಾಹನ ಚಾಲಕರನ್ನು ಮರು ಟೆಂಡರ್ ಪದ್ಧತಿಗೆ ಒಳಪಡಿಸುವುದು ಸರಿಯಾದ ಕ್ರಮವಲ್ಲ. ಸ್ವಚ್ಛತಾ ವಾಹನ ಚಾಲಕರ ಕರ್ತವ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಿತ ಸಮಯಪಾಲನೆ ಇಲ್ಲದ, ಪ್ರಾಣಿಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಸಕಾಲಕ್ಕೆ ವೇತನ ನೀಡದೇ ಕಿರುಕುಳ ನೀಡಲಾಗುತ್ತಿದೆ. ಹೊರಗುತ್ತಿಗೆ ಎಂಬುದು ಸರಕಾರದ ಅಧಿಕೃತ ಜೀತಗಾರಿಕೆ ಎಂಬಂತಾಗಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಫಾಯಿ ಕರ್ಮಚಾರಿಗಳ ಸಂಘ ದಕದ ಅಧ್ಯಕ್ಷ ನಾರಾಯಣ ಶೆಟ್ಟಿ, ಕರಾವಳಿ ಪ್ರದೇಶದ ಸಂಚಾಲಕ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು
ರಾಜ್ಯ ಕಾರ್ಯದರ್ಶಿ ಶ್ರೀನಿವಾಸ, ಉಡುಪಿ ವಿಭಾಗದ ವಿನಯ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.