ಮಂಗಳೂರು: ಧರ್ಮ ಭಗಿನಿಯರು ಪುಸ್ತಕ ಬಿಡುಗಡೆ-ಮಹಿಳೆ ಮತ್ತು ಸನ್ಯಾಸ ವಿಚಾರ ಸಂಕಿರಣ

ಮಂಗಳೂರಿನ ಉರ್ವ ಸ್ಟೋರ್‌ನ ಕರಾವಳಿ ಲೇಖಕಿಯರ ವಾಚಕರ ಸಂಘದ ಹಾಲ್‌ನಲ್ಲಿ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಸಹಯೋಗದೊಂದಿಗೆ ’ಧರ್ಮ ಭಗಿನಿಯರು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಮಹಿಳೆ ಮತ್ತು ಸನ್ಯಾಸ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಸಹ ನಡೆಯಿತು.

ಜಗತ್ತಿನಲ್ಲಿ ಹಿಸ್ ಸ್ಟೋರಿ ಇದೆ, ಹರ್ ಸ್ಟೋರಿಯನ್ನು ನಾವೇ ಬರೆಯಬೇಕಾಗಿದೆ. ಹೆಣ್ಣುಮಕ್ಕಳನ್ನು ಅಡುಗೆ ಕೋಣೆ, ಹೆರಿಗೆ ಕೋಣೆಗೆ ಸೀಮಿತಗೊಳಿಸಿದ್ದ ಸಮಾಜದಲ್ಲಿ ನಮ್ಮದು ಹೋರಾಟದ, ಸೌಹಾರ್ದದ ಬದುಕು. ಇದೂ ಹೋರಾಟದ ಸನ್ಯಾಸತ್ವ ಮತ್ತು ಧರ್ಮ ಬಂಡಾಯದ ಭಗಿನಿಯರ ಕತೆಯೂ ಹೌದು ಎಂದು ಪುಸ್ತಕದ ಲೇಖಕಿಯರಲ್ಲಿ ಒಬ್ಬರಾದ ಬಿ. ಎಂ. ರೋಹಿಣಿಯವರು ಪ್ರಾಸ್ತಾವಿಕದ ಮಾತನಾಡುತ್ತ ಹೇಳಿದರು.

ಸಂತ ಮದರ್ ತೆರೇಸಾ ವೇದಿಕೆಯ ರಾಯ್ ಕ್ಯಾಸ್ಟಲಿನೋ ಅವರು ಧರ್ಮ ಭಗಿನಿಯರು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಬಿಕ್ಕುಣಿ ಗೌತಮಿ, ಸಾರನಾಥ ಬೌದ್ಧ ವಿಹಾರ ಅವರು ಮಾತನಾಡಿ, ನದಿ ನೀರಿನ ವಿವಾದ ಆಗ ವಿಪರೀತ ಇತ್ತು. ಯುದ್ಧಕ್ಕೆ ಕಾರಣನಾಗಿ ಸಾವುನೋವುಗಳಿಗೆ ಅವಕಾಶ ನೀಡಬಾರದು ಎಂಬುದಕ್ಕಾಗಿ ಗೌತಮನು ಅರಮನೆ ತೊರೆದು, ಜಗದ ಅನುಭವದಲ್ಲಿ ಬುದ್ಧನಾದನು ಎಂದು ಹೇಳಿದರು.

ಧರ್ಮ ಭಗಿನಿಯರು ಪುಸ್ತಕವನ್ನು ರೋಹಿಣಿಯವರೊಂದಿಗೆ ಸೇರಿ ಬರೆದವರು ಮೋಲಿ ಮಿರಾಂಡಾ. ಅವರು ಪುಸ್ತಕದ ಹಾಗೂ ಕ್ಯಾಸ್ಟಲಿನೋ ಅವರ ಕಿರು ಮಾಹಿತಿಯನ್ನು ಇತ್ತರು.

ಶ್ರವಣಬೆಳಗೊಳದ ಪ್ರಾಕೃತ ಭಾಷಾ ವಿದ್ವಾಂಸೆ ಡಾ. ಕುಸುಮಾ ಅವರು ಮಾತನಾಡಿ, ಜಗತ್ತಿನ ಅತಿ ಹಳೆಯ ಧರ್ಮವಾದ ಜೈನದಲ್ಲಿ ಶುಭ ಅಶುಭವನ್ನು ಮೀರಿ ಶೂನ್ಯದಲ್ಲಿ ಮುಕ್ತಿ ಸಾಧ್ಯ. ಇಲ್ಲಿ ಸೃಷ್ಟಿ ಇಲ್ಲ, ದೃಷ್ಟಿ ಇದೆ ಎಂದು ಹೇಳಿದರು.

ಬೆಥನಿ ಕನ್ಯಾ ಮಠದ ಅನ್ನಾ ಮರಿಯಾ ಅವರು ಮಾತನಾಡಿ, ಸನ್ಯಾಸ ಎನ್ನುವುದು ನೀರ ಮೇಲಿನ ತಾವರೆಯಂತೆ, ಈ ಜಗತ್ತಿನಲ್ಲಿ ಇದ್ದರೂ ಜಗತ್ತಿಗೆ ಅಂಟಿಕೊಳ್ಳದವರು ಸನ್ಯಾಸಿಗಳು, ಎಲ್ಲ ಧರ್ಮದಲ್ಲೂ ಇದೇ ವಾಡಿಕೆ ಎಂದ ಅವರು,  ಆರು ಸಾವಿರ ಮಕ್ಕಳಿಗೆ ಇಂಗ್ಲಿಷ್ ಕಲಿಸಿ ಮೆಚ್ಚುಗೆ ಗಳಿಸಿರುವ ತೃಪ್ತಿ ಇದೆ ಎಂದೂ ಅವರು ಹೇಳಿದರು.

ಬ್ರಹ್ಮಕುಮಾರಿಯ ವಿಶ್ವೇಶ್ವರಿ ಅವರು ಮಾತನಾಡಿ, ನಾವು ಅತ್ಯುತ್ತಮ ಎಂದು ಕೆಲಸ ಮಾಡುವುದಕ್ಕೆ ನಾವು ಮೊದಲ ಮಣೆ ಹಾಕುತ್ತೇವೆ ಎಂದು ಅವರು ಹೇಳಿದರು.

ಕಲೇವಾ ಸಂಘದ ಅರುಣಾ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಡಾ. ಜ್ಯೋತಿ ಚೇಳ್ಯಾರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ರೂಪಕಲಾ ಆಳ್ವ   ವಂದಿಸಿದರು.

Related Posts

Leave a Reply

Your email address will not be published.