ಮಂಗಳೂರು: ಮಾನವೀಯತೆ ಮೆರೆದ ಬಸ್ ಸಿಬ್ಬಂದಿಗೆ ತುಳು ಚಲನ ಚಿತ್ರ ನಿರ್ಮಾಪಕರ ಸಂಘದಿಂದ ಅಭಿನಂದನೆ
ಮಂಗಳೂರು: ಬಸ್‌ನಲ್ಲಿ ಅನಾರೋಗ್ಯಕ್ಕೀಡಾದ ವಿದ್ಯಾರ್ಥಿನಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಕೃಷ್ಣ ಪ್ರಸಾದ್ ಟ್ರಾವೆಲ್ಸ್ ಬಸ್ ಚಾಲಕ ಗಜೇಂದ್ರ ಕುಂದರ್, ನಿರ್ವಾಹಕರಾದ ಸುರೇಶ್, ಮಹೇಶ್‌ರನ್ನು ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ವತಿಯಿಂದ ಬಂಟ್ಸ್ ಹಾಸ್ಟೇಲ್ ಬಳಿಯ ಹೊಟೇಲ್ ವುಡ್ ಲ್ಯಾಂಡ್ ನ ಸಭಾಂಗಣದಲ್ಲಿ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಆರ್ ಧನರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಬಸ್ ಸಿಬ್ಬಂದಿಗಳ ಮಾನವೀಯತೆಯ ಕಾಳಜಿ ಮೆಚ್ಚುವಂತದ್ದು, ಅವರೆಲ್ಲರೂ ಅಭಿನಂದನೆಗೆ ಅರ್ಹರು. ಇದರ ಜೊತೆಗೆ ತುಳು ಚಲನ ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳಲ್ಲಿ ಅಧ್ಯಕ್ಷರು ತೊಡಗಿಸಿ ಕೊಳ್ಳಬೇಕಾಗಿದೆ ಎಂದರು. ನಿರ್ಮಾಪಕ ಕಿಶೋರ್ ಡಿ ಶೆಟ್ಟಿ ಮಾತನಾಡಿ ಇಂತಹ ಕಾರ್ಯಕ್ರಮ ನಿರ್ಮಾಪಕರ ಸಂಘದಿಂದ ನಿರಂತರ ನಡೆಯಲಿ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಂಚಾಡಿ, ನಿರ್ಮಾಪಕರಾದ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.