ಮಂಗಳೂರು: ದಕ್ಷಿಣದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳನ್ನು ಕುಗ್ಗಿಸಲು ಕೇಂದ್ರ ಸರ್ಕಾರ ಯತ್ನ :ಡಿ.ಕೆ ಶಿವಕುಮಾರ್

ದಕ್ಷಿಣದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳನ್ನು ಕುಗ್ಗಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್ ಹೋರಾಡಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಆಯೋಜಿಸಿರುವ ಅಮ್ಮನ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು.
‘ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳ ಬಲ ಕಡಿಮೆ ಆಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಇಂಥ ಕೆಲಸಕ್ಕೆ ಮುಂದಾಗಿದೆ. ಇದು ಸರಿಯಲ್ಲ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಕಾಂಗ್ರೆಸ್ ವಿರೋಧವಿದೆ’ ಎಂದು ಅವರು ಹೇಳಿದರು.
‘ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಅಗತ್ಯವಿದ್ದರೆ ನ್ಯಾಯಾಲಯದ ಮೂಲಕವೂ ಹೋರಾಟ ಮಾಡಲಾಗುವುದು’ ಎಂದು ಅವರು ಹೇಳಿದರು.