ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿಯಾದ ಮಂಜೇಶ್ವರ ಸ್ನೇಹಾಲಯ
ಮಂಜೇಶ್ವರದ ಸ್ನೇಹಾಲಯವು ಭಾವನಾತ್ಮಕ ಪುನರ್ಮಿಲನಕ್ಕೆ ಸಾಕ್ಷಿಯಾಗಿದ್ದು, ಕಳೆದ ಹತ್ತು ವರ್ಷದ ಹಿಂದೆ ಕಾಣೆಯಾಗಿದ್ದ ಪ್ರವೀಣ್ ಪುನಃ ಹೆತ್ತವರ ಮಡಿಲು ಸೇರಿದ ಘಟನೆ ಸ್ನೇಹಾಲಯದಲ್ಲಿ ನಡೆಯಿತು.
ಮಂಗಳೂರಿನ ಅತ್ತಾವರದ ಕೆ.ಮ್.ಸಿ ಆಸ್ಪತ್ರೆಯ ಬಳಿಯಿಂದ ಸ್ನೇಹಾಲಯದ ಸಹೋದರ ಜೋಸೆಫ್ ಕ್ರಾಸ್ತಾರಾವರು ಪ್ರವೀಣನನ್ನು ರಕ್ಷಿಸಿ ಸ್ನೇಹಾಲಯಕ್ಕೆ ದಾಖಲಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಆತ ಸ್ನೇಹಾಲಯದಲ್ಲಿ ಎಲ್ಲರ ಪ್ರೀತಿ ಪಾತ್ರನಾಗಿದ್ದ, ಆತನ ನಿಜ ಹೆಸರು ತಿಳಿಯದ ಕಾರಣ ಆತನಿಗೆ ಪ್ರೀತಿಯಿಂದ ’ಧೂಮ’ಎಂಬ ಹೆಸರನ್ನು ಇಡಲಾಗಿತ್ತು. ಇನ್ನೊಂದೆಡೆ ಆತನ ಕುಟುಂಬ ಆತನನ್ನು ಹುಡುಕಾಡದ ಸ್ಥಳಗಳಿಲ್ಲ. ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು ಯಾವುದೇ ಫಲ ಸಿಗಲಿಲ್ಲ.ಈ ನಡುವೆ ಆತನನ್ನು ಹುಡುಕಾಡಲು ಕುಟುಂಬ ಪಟ್ಟ ಪ್ರಯತ್ನ ಒಂದೆರಡಲ್ಲ.
ಸಾಮಾನ್ಯವಾಗಿ ಆಧಾರ್ ಕಾರ್ಡ್ ಮಾಡುವಾಗ ಬಯೊಮೆಟ್ರಿಕ್ ತಂತ್ರಜ್ನಾನವನ್ನು ಉಪಯೋಗಿಸಿ ವ್ಯಕ್ತಿಯ ಮಾಹಿತಿಯನ್ನು ಶೇಖರಿಸಿಡುವುದು ಎಲ್ಲರಿಗೆ ತಿಳಿದ ಸಂಗತಿ.ಆದರೆ ಇದೇ ತಂತ್ರಜ್ನಾನ ಒರ್ವ ವ್ಯಕ್ತಿಯನ್ನು ಇಷ್ಟು ವರ್ಷದ ಬಳಿಕ ಕುಟುಂಬ ಸೇರಿಸುವುದು ಪ್ರಶಂಸನೀಯ. ಸ್ನೇಹಾಲಯ ಮತ್ತು ಮಂಗಳೂರಿನ ಆಧಾರ್ ಸೇವಾ ಕೇಂದ್ರದ ಜಂಟಿ ಸಹಯೋಗದಲ್ಲಿ ಸ್ನೇಹಾಲಯದ ನಿವಾಸಿಗಳಿಗೆ ಆಧಾರ್ ಶಿಬಿರವನ್ನು ಏರ್ಪಡಿಸಲಾಗಿತ್ತು, ಮತ್ತು ಇದರ ಫಲವಾಗಿ ಸುಮಾರು ೩೬ ನಿವಾಸಿಗಳ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಪ್ರವೀಣನ ವಿಳಾಸ ಸಿಕ್ಕಿದ ತಕ್ಷಣ ಸ್ನೇಹಾಲಯದ ಸಮಾಜ ಕಾರ್ಯ ವಿಭಾಗದ ಸಿಬ್ಬಂಧಿಗಳು ಆತನ ಕುಟುಂಬವನ್ನು ಸಂಪರ್ಕಿಸಿ ಈ ಸುದ್ದಿಯನ್ನು ತಿಳಿಸಿದರು.
ಆತನ ಕುಟುಂಬಿಕರು ಮಂಜೇಶ್ವರದ ಸ್ನೇಹಾಲಯಕ್ಕೆ ಆಗಮಿಸಿದರು.ಸಹೋದರ ಜೋಸೆಫ್ ಕ್ರಾಸ್ತಾ ಮತ್ತು ಸ್ನೇಹಾಲಯ ಸಿಬ್ಬಂದಿಗಳ ಸಮ್ಮುಖದಲ್ಲಿ ಪುನರ್ಮಿಲನ ಕಾರ್ಯ ನಡೆಯಿತು. ಈ ಕಾರ್ಯಕ್ಕೆ ಸಹಕರಿದ ಸ್ನೇಹಾಲಯ ಸಂಸ್ಥೆಗೆ ಕುಟುಂಬಿಕರು ತುಂಬು ಹೃದಯ ಕೃತಜ್ನತೆಗಳನ್ನು ಸಲ್ಲಿಸಿದರು.