ಉಪ್ಪಿನಂಗಡಿ : ಪುರುಷರ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ
ಮಂಗಳೂರು ವಿವಿಯು ಐದು ದಿನಗಳ ಕಾಲ ಆಯೋಜಿಸಿರುವ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅದ್ದೂರಿಯ ಚಾಲನೆ ದೊರಕಿದೆ.
ರಾಷ್ಟ್ರ ಧ್ವಜದ ಬಣ್ಣವನ್ನು ಸಂಕೇತಿಸುವ ಬಲೂನುಗಳನ್ನು ಗಗನದೆತ್ತರಕ್ಕೆ ಹಾರಿಬಿಡುವ ಮೂಲಕ ಶಾಸಕ ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಮಠಂದೂರು ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು. ಅದರೊಂದಿಗೆ ನೂರಾರು ಬಣ್ಣಬಣ್ಣದ ಬಲೂನುಗಳನ್ನು ಹಾರಿಬಿಡಲಾಯಿತು. ಬಳಿಕ ಮಾತನಾಡಿದ ಅವರು, ಬಾಲ್ ಬ್ಯಾಡ್ಮಿಂಟನ್ ಆಟವು ಭಾರತದ ಗ್ರಾಮೀಣ ಕ್ರೀಡೆಯಾಗಿದ್ದು, ಇದು ತಮಿಳುನಾಡಿನ ತಂಜಾವೂರಿನ ಶ್ರೀಮಂತ ಮನೆತನದವರಿಂದ ಈ ಕ್ರೀಡೆ ಹುಟ್ಟಿಕೊಂಡಿತು. ದೇಶದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಈ ಕ್ರೀಡೆಯಿಂದ ಆಯೋಜನೆಗೊಂಡಿರುವ ನಮ್ಮೂರಿಗೆ ಹೆಮ್ಮೆಯ ವಿಷಯವಾಗಿದ್ದು, ಕ್ರೀಡಾಳುಗಳು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು ಹಾಗೂ ತೆರೆದ ಹೃದಯದಿಂದ ತೀರ್ಪನ್ನು ಸ್ವೀಕರಿಸುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿವಿಯ ರಿಜಿಸ್ಟ್ರಾರ್ ಡಾ. ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ, ಬೋಧನೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮಂಗಳೂರು ವಿವಿಯು ಉತ್ತಮವಾಗಿ ತೊಡಗಿಸಿಕೊಂಡಿದ್ದು, ಕ್ರೀಡಾಳುಗಳಿಗೆ ಉತ್ತಮ ಪೆÇ್ರೀತ್ಸಾಹ, ಸಹಕಾರ ಹಾಗೂ ಮೂಲ ಸೌಕರ್ಯ ನೀಡುವಲ್ಲಿ ರಾಜ್ಯದಲ್ಲೇ ಮುಂದಿದೆ ಎಂದರಲ್ಲದೆ, ಈ ಪಂದ್ಯಾಟದಿಂದ ಇನ್ನಷ್ಟು ಸಾಧಕರು ಸೃಷ್ಟಿಯಾಗಬೇಕು ಎಂದು ಶುಭಹಾರೈಸಿದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಇಲ್ಯಾಸ್, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸಂಚಾಲಕರಾದ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆರಾಲ್ಡ್ ಎಸ್.ಡಿ ಸೋಜ ಸ್ವಾಗತಿಸಿದರು. ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ ಸುಬ್ಬಪ್ಪ ಕೈಕಂಬ ವಂದಿಸಿದರು. ಮುತ್ತುಮಿಲ್ ಪ್ರತಿಜ್ಞಾ ವಿಧಿ ಬೋಧಿಸಿದರು. ಆಳ್ವಾಸ್ ಕಾಲೇಜಿನ ರಾಜೇಶ್ ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕ್‍ನ ಮುತ್ತು ನಿರೂಪಿಸಿದರು.
ತುಳುನಾಡ ಸಂಸ್ಕೃತಿ ಬಿಂಬಿಸುವ ಹುಲಿ ಕುಣಿತ, ಕೇರಳದ ಚೆಂಡೆ, ನಾಸಿಕ್‍ನ ಬ್ಯಾಂಡ್, ಡೊಳ್ಳು ಕುಣಿತ, ಕೀಲು ಕುದುರೆ, ತಟ್ಟಿರಾಯ, ಗೊಂಬೆ ಕುಣಿತ ಮೆರವಣಿಗೆಗೆ ಮೆರುಗು ತುಂಬಿದವು. ಮೈದಾನದಲ್ಲಿ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.