ಶ್ರೀ ಉಮಾಮಹೇಶ್ವರ ದೇವಸ್ಥಾನ : ಸಚಿವ ವಿ. ಸುನೀಲ್ ಕುಮಾರ್ ಅವರಿಂದ “ಅತಿರುದ್ರ ಮಹಾಯಾಗ”ದ ತಯಾರಿಗಳ ಪರಿಶೀಲನೆ

ಮಣಿಪಾಲ ಸರಳೆಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ಲೋಕಕಲ್ಯಾಣಕ್ಕಾಗಿ ನಡೆಯಲಿರುವ “ಅತಿರುದ್ರ ಮಹಾಯಾಗ” ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅತಿರುದ್ರ ಮಹಾಯಾಗಕ್ಕೆ ಸಾಕಷ್ಟು ತಯಾರಿಗಳು ಬಿಡುವಿಲ್ಲದೆ ನಡೆಯುತ್ತಿವೆ. ಈಗಾಗಲೇ ಉಡುಪಿ ತಾಲೂಕು ಮಟ್ಟದ ಪುಟಾಣಿಗಳ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಲು “ಶಿವ ಚಿತ್ತಾರ” ಚಿತ್ರಕಲಾ ಸ್ಪರ್ಧೆಯನ್ನು ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದು, ಅತ್ಯಂತ ಅದ್ಭುತವಾಗಿ ಮೂಡಿ ಬಂದಿತ್ತು. ಇದೀಗ ಫೆಬ್ರವರಿ 12, 2023 ರ ಭಾನುವಾರದಂದು ಉಡುಪಿ ಜಿಲ್ಲಾ ಮಟ್ಟದ ಪುಟಾಣಿಗಳಿಗಾಗಿ “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಇದರ ಸಲುವಾಗಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಉಡುಪಿಯ ಶಾಸಕ ಕೆ. ರಘುಪತಿ ಭಟ್ ಮತ್ತು ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ದೇವಸ್ಥಾನಕ್ಕೆ ಆಗಮಿಸಿ “ಅತಿರುದ್ರ ಮಹಾಯಾಗ” ಮತ್ತು ಇತರೆ ಕಾರ್ಯಕ್ರಮಗಳ ತಯಾರಿಯನ್ನು ಪರಿಶೀಲಿಸಿದರು. ದೇವಸ್ಥಾನದಲ್ಲಿ ಉಪಸ್ಥಿತರಿದ್ದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ರವರು ಮಹಾಯಾಗಕ್ಕಾಗಿ ನಡೆಯುತ್ತಿರುವ ಸಕಲ ಸಿದ್ಧತೆಗಳನ್ನು ಶಾಸಕ ಕೆ. ರಘುಪತಿ ಭಟ್ ಮತ್ತು ಸಚಿವ ವಿ. ಸುನೀಲ್ ಕುಮಾರ್ ಅವರಿಗೆ ವಿವರಿಸಿದರು