ಆಸ್ಪತ್ರೆ ಕಟ್ಟಡ, ಮೂಲಸೌಕರ್ಯ, ಜಾಗದ ಕೊರತೆ ನೀಗಿಸಲು ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ಸೂಚನೆ
ಬೈಂದೂರು: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲೆಡೆ ಅಗತ್ಯ ಎಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ ಸಾರ್ವಜನಿಕವಾಗಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರದ ಗುರುರಾಜ್ ಗಂಟಿಹೊಳೆ ನಿರ್ದೇಶನ ನೀಡಿದರು.
ಉಪ್ಪುಂದದ ಕಾರ್ಯಕರ್ತದಲ್ಲಿ ಆರೋಗ್ಯ & ಆಯುಷ್ ಇಲಾಖೆ ವೈದ್ಯಾಧಿಕಾರಿಗಳು, ಕಂದಾಯ & ಸರ್ವೇ ಇಲಾಖೆ ಹಾಗೂ ಬಿಎಸ್ಎನ್ಎಲ್ ಮತ್ತು ಕೆಪಿಸಿಎಲ್ ಇಲಾಖೆ ಪ್ರಗತಿ ಪರಿಶೀಲನೆ ಹಾಗೂ ಈ ಇಲಾಖೆಗಳಲ್ಲಿ ಅನ್ಯ ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಇರುವ ಕಡತಗಳ ವಿಲೇವಾರಿ ಕುರಿತಾದ ಜಂಟಿ ಇಲಾಖಾ ಸಭೆ ನಡೆಸಿ ಈ ಸೂಚನೆ ನೀಡಿದರು.
ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು, ಆಸ್ಪತ್ರೆಗೆ ಅಗತ್ಯ ಕಟ್ಟಡ ವ್ಯವಸ್ಥೆ ಮಾಡಿಸುವುದು, ಕಟ್ಟಡಕ್ಕೆ ಬೇಕಾದ ಜಾಗ ಗುರುತಿಸುವುದು ಇತ್ಯಾದಿಗಳನ್ನು ತ್ವರಿತವಾಗಿ ಮಾಡಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಆರೋಗ್ಯ ಇಲಾಖೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರ ಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ವಹಿಸುವುದು. ರೋಗಿಗಳಿಗೆ ಔಷಧ ಕೊರತೆ ಆಗದಂತೆ ಕ್ರಮವಹಿಸಬೇಕು. ಆರೋಗ್ಯ ಕೇಂದ್ರಗಳ ಕಟ್ಟಡ ಇರುವ ಜಾಗದ ದಾಖಲೆ ಗಳನ್ನು ಸರಿ ಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಕಂದಾಯ ಹಾಗೂ ಸರ್ವೇ ಇಲಾಖೆ ಜತೆ ಸಮನ್ವಯ ಸಾಧಿಸಿ. ಆದಷ್ಟು ಶೀಘ್ರ ದಾಖಲೆಗಳನ್ನು ಸರಿ ಪಡಿಸಿಕೊಳ್ಳಬೇಕು ಎಂದರು.
ನಾಡ ಹಾಗೂ ಹೇರೂರು ವಿನಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ಮಂಜೂರಾಗಿದ್ದು ಪ್ರತಿ ಕೇಂದ್ರಕ್ಕೆ 65 ಲಕ್ಷ ಅನುದಾನ ಬಿಡುಗಡೆ ಆಗಿರುತ್ತದೆ. ಸದರಿ ಕೇಂದ್ರ ಗಳಿಗೆ ಕೂಡಲೇ ನಿವೇಶನ ಒದಗಿಸಬೇಕು. ಕ್ಷೇತ್ರಕ್ಕೆ ಎರಡು ನಮ್ಮ ಕ್ಲಿನಿಕ್ ಮಂಜೂರಾಗಿದ್ದು ಸದ್ಯದಲ್ಲೇ ಕಾರ್ಯರಂಭ ಮಾಡಬೇಕು ಎಂದು ಹೇಳಿದರು.
ಡೆಂಗ್ಯೂ ಎಚ್ಚರ, ಅರಿವು ಅಗತ್ಯ
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಕ್ಷೇತ್ರದ ಕೊಲ್ಲೂರು ಹಾಗೂ ಜಡ್ಕಲ್ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಿದ್ದು ಎಚ್ಚರಿಕೆ ವಹಿಸಲು ಅಲ್ಲಿನ ವೈದ್ಯಧಿಕಾರಿಗಳು ಮುಂದಾಗಬೇಕು. ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯಿಸುವಂತಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಈ ಬಗ್ಗೆ ಜನ ಜಾಗೃತಿ ಮೂಡಿಸುವುದು ಆಗಬೇಕು ಎಂದು ಸೂಚಿಸಿದರು.
ಎಂಡೋಸೆಲ್ಫಾನ್ ಪುನರ್ವಸತಿ ಕೇಂದ್ರ ಕ್ಷೇತ್ರದ ಶಿರೂರು, ಕೊಲ್ಲೂರು, ಕಿರಿಮಂಜೇಶ್ವರ, ಆಲೂರು,ಸಿದ್ಧಾಪುರ ಪ್ರಾಥ ಮಿಕ ಆರೋಗ್ಯ ಕೇಂದ್ರ ಗಳಲ್ಲಿ ಪ್ರಾರಂಭಿಸಲಾಗಿದ್ದು ಬಾಧಿತರಿಗೆ ಅಗತ್ಯ ಆರೋಗ್ಯ ಸೇವೆ ನೀಡಲು ಕ್ರಮ ತೆಗೆದುಕೊಳ್ಳಬೇಕು.
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿರುವ ವಿಶೇಷ ಚೇತನರು, ಬೆನ್ನುಹುರಿ ಅಪಘಾತಕ್ಕೆ ಒಳಗದವರ ಬಗ್ಗೆ ವಿಶೇಷ ಕಾಳಜಿ ಇರಬೇಕು. ಅವರಿಗೆ ಇಲಾಖೆಯ ಸೌಲಭ್ಯ ಒದಗಿಸಬೇಕು. ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತರ ಕೊರತೆ ಬಗ್ಗೆ ವೈದ್ಯಧಿಕಾರಿಗಳು ಗಮನಕ್ಕೆ ತರಲಾಗಿ ಆಶಾ ಕಾರ್ಯಕರ್ತರ ನೇಮಕಕ್ಕೆ ಸರಕಾರಕ್ಕೆ ಒತ್ತಡ ಹಾಕಲಾಗುವುದು, ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದು, ಪ್ರಸ್ತಾವನೆ ಕಳುಹಿಸುವುದು ಆಗಬೇಕು ಎಂದರು.
ಆರೋಗ್ಯ ಕೇಂದ್ರಗಳ ವಾಪ್ತಿಯಲ್ಲಿ ಬರುವ ಗ್ರಾಮ ಗಳು ಆಯಾ ಆರೋಗ್ಯ ಕೇಂದ್ರಗಳಿಗೆ ಸಮರ್ಪಕವಾಗಿ ವಿಂಗಡಣೆ ಆಗದ ಕಾರಣ ಸಮರ್ಪಕ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ಕಷ್ಟ ಸಾಧ್ಯವಾಗುತ್ತಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕ್ಷೇತ್ರ ಮರು ವಿಂಗಡಣೆ ಆದರೆ ಆರೋಗ್ಯ ಸೇವೆಗಳು ಸುಗಮವಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಶಾಸಕರು ತಿಳಿಸಿದರು.
ಬೈಂದೂರು ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಇರುವ ಜಾಗ ಗುರುತಿಸುವಿಕೆ ಹಾಗೂ ಗಡಿ ಗುರುತಿಸುವ ಕಾರ್ಯವನ್ನು ಕೂಡಲೇ ಮಾಡಲು ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ತಾಲೂಕು ಆಸ್ಪತ್ರೆ ಯಲ್ಲಿ ಡಯಲಿಸಿಸ್ ಘಟಕ ಕಾಮಗಾರಿ ನಡೆಯುತ್ತಿದ್ದು ಆರ್ ಒ ಪ್ಲಾಂಟ್ ನಿರ್ಮಾಣಕ್ಕೆ ಅನುದಾನದ ಕೊರತೆಯಿದ್ದು ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಲು ಈಗಾಗಲೇ ಇಲಾಖೆಯ ಆಯುಕ್ತರಿಗೆ ಮನವಿ ಮಾಡಲಾಗಿದ್ದು. ಶೀಘ್ರವಾಗಿ ಕಾಮಗಾರಿ ಮುಗಿಸಿ ಸೇವೆಗೆ ಲಭ್ಯವಾಗುವಂತೆ ಮಾಡಲಾಗುವುದು. ಅಲ್ಲದೆ ಖಾಸಗಿ ಸಹಭಾಗಿತ್ವ ದಲ್ಲಿ ಕ್ಷೇತ್ರದ ನೊಂದವರಿಗೆ ಡಯಲಿಸಿಸ್ ಸೇವೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರ ಗಳ ನ್ನಾಗಿ ಮೇಲ್ದರ್ಜೆ ಗೇರಿಸಲು ಪ್ರಸ್ತಾವನೆಯ ಮುಂದಿನ ಹಂತದ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ತಾಲೂಕು ವೈದ್ಯಾಧಿಕಾರಿ ಡಾ. ಪ್ರೇಮಾನಂದ ಶೆಟ್ಟಿ, ಬಿಎಸ್ ಎನ್ ಎಲ್ ಅಧಿಕಾರಿ ಕೃಷ್ಣ, ಶಂಕರನಾರಾಯಣ ವಿಭಾಗದ ಆರ್ ಎಫ್ಒ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.