ಏರ್‌ಟೆಲ್ ಸಿಮ್ ಬಳಸುವವರ ಎರಡು ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣವನ್ನು ಕದ್ದಿರುವ ಪ್ರಕರಣ ಬೆಳಕು ಕಂಡಿದ್ದು, ಕರ್ನಾಟಕ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿದೆ.

ವಿಧಾನ ಸೌಧದ ಸಮಿತಿ ಕೋಣೆಯಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆ ನಡೆಯಿತು.

ಏರ್‌ಟೆಲ್ ಸಿಮ್ ಹೊಂದಿರುವ ಗೃಹಲಕ್ಷ್ಮಿಯರ ಹಣವನ್ನು ಕೆಲವು ಕದೀಮರು ಬದಲಿ ಯುಪಿಐ ಕಳ್ಳಕೀ ಬಳಸಿ ಎರಡು ಸಾವಿರ ರೂಪಾಯಿ ಎಗರಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಸರಕಾರದ ಗಮನಕ್ಕೆ ತಂದರು.

ಈ ಬಗೆಗೆ ಪೂರ್ಣ ತನಿಖೆಯ ಅಗತ್ಯವಿದೆ ಎಂದು ತೀರ್ಮಾನಿಸಲಾಯಿತು. ಫಲಾನುಭವಿಗಳ ಬ್ಯಾಂಕು ಖಾತೆಗಳು ರಾಜ್ಯದಲ್ಲೇ ಇರಬೇಕು, ಪರ ರಾಜ್ಯದ ಬ್ಯಾಂಕು ಖಾತೆಗಳಿಗೆ, ಇಲ್ಲವೇ ಪರ ರಾಜ್ಯದವರಿಗೆ ಗೃಹಲಕ್ಷ್ಮಿ ಹಣ ಹೋಗದಂತೆ ಸಮಗ್ರ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಮೃತಪಟ್ಟವರಿಗೆ, ಗೃಹಿಣಿಯಲ್ಲದವರಿಗೆ ಗೃಹಲಕ್ಷ್ಮಿ ಹಣ ಹೋಗಿರುವುದು ಕಂಡುಬಂದಿದೆ. ಈ ರೀತಿ ಹಣ ದುರುಪಯೋಗ ಆಗಬಾರದು. ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ನಮೂನೆ ಬಂದಿದೆ.

ಅರ್ಜಿ ಆಧಾರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಆಯ್ಕೆಯಾದವರಿಗೆ ಆ ಕೂಡಲೆ ವಾಯ್ಸ್ ಮೆಸೇಜ್ ಬರುತ್ತದೆ ಎಂದೂ ಸಭೆಗೆ ತಿಳಿಸಲಾಯಿತು. ಯಾವುದೇ ಭಾಗ್ಯದ ದುರುಪಯೋಗ ಆಗದಂತೆ ನೋಡುವುದು ಅಧಿಕಾರಿಗಳ ಜವಾಬುದಾರಿ ಎಂದು ಸೂಚಿಸಲಾಯಿತು.

