ಮೂಡುಬಿದರೆ : 6 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ

ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ಬಳಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನಕ್ಕೆಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸಗೈದರು. ನಂತರ ಮಾತನಾಡಿದ ಅವರು 1500 ಅಂಬೇಡ್ಕರ್ ಭವನಗಳು ಸೂಕ್ತ ರೀತಿಯಲ್ಲಿ ನಿರ್ವಹಣೆಯಿಲ್ಲದಿರುವುದರಿಂದ ಅವುಗಳನ್ನು ಗ್ರಂಥಾಲಯವಾಗಿ ಪರಿವರ್ತಿಸಲು ಈಗಾಗಲೇ ಆದೇಶಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಪಡೆಯಲು ಸರ್ಕಾರ ಹಲವಾರು ಯೋಜನೆಗಳನ್ನು ತಂದಿದೆ ಎಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಅಂಬೇಡ್ಕರ್ ಅವರ ಜೀವನ, ಚಿಂತನೆಯನ್ನು ಒಳಗೊಳ್ಳುವ ಸುಸಜ್ಜಿತ ಭವನ, ಪಾರ್ಕ್ ಎರಡುವರೆ ಎಕರೆಯಲ್ಲಿ ನಿರ್ಮಾಣಗೊಳ್ಳಲಿದೆ. ಈಗಾಗಲೇ ಸರ್ಕಾರದಿಂದ 2 ಕೋಟಿ ರೂ. ಹಣ ಮಂಜೂರಾಗಿದೆ ಎಂದರು. ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮೂಡಾ ಮಾಜಿ ಅಧ್ಯಕ್ಷ ಮೇಘನಾದ್ ಶೆಟ್ಟಿ, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ದ.ಕ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ ಬೇವಿನಮಟ್ಟಿ, ಸಹಾಯಕ ನಿರ್ದೇಶಕ ಸುರೇಶ್ ಉಪಸ್ಥಿತರಿದ್ದರು, ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.
