ಮೂಡುಬಿದರೆ – ಮಾರ್ಕೆಟ್‍ನಲ್ಲಿ ರಾಶಿ ಹಾಕಿರುವ ಗುಜರಿ ವಸ್ತು ತೆರವುಗೊಳಿಸಲು ಕ್ರಮ : ಪುರಸಭಾ ಸದಸ್ಯ ರಾಜೇಶ್ ನಾಯ್ಕ್

ಮೂಡುಬಿದಿರೆ: ಸ್ವರಾಜ್ಯ ಮೈದಾನದ ಮಾರ್ಕೆಟ್ ನಲ್ಲಿ ಗುಜರಿ ಅಂಗಡಿಯಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ರಾಶಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿದೆ. ರಾಶಿ ಹಾಕಿರುವ ಗುಜರಿ ವಸ್ತುಗಳನ್ನು ತೆರವುಗೊಳಿಸುವಂತೆ ಸದಸ್ಯ ರಾಜೇಶ್ ನಾಯ್ಕ್ ಪುರಸಭಾ ಸಾಮಾನ್ಯ ಸಭೆಯಲ್ಲಿ ತಿಳಿಸಿದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭಾ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದರು. ಮೂಡುಬಿದಿರೆಯ ಮುಖ್ಯರಸ್ತೆ, ಮಸೀದಿ ರಸ್ತೆ, ವಿಜಯನಗರ, ಮಾರ್ಕೆಟ್ ರಸ್ತೆ ಮತ್ತಿತರ ಕಡೆಗಳಲ್ಲಿ ಫುಟ್‍ಪಾತ್‍ವರೆಗೆ ಅಂಗಡಿ ವಿಸ್ತರಿಸಿ ವ್ಯಾಪಾರ ನಡೆಸುವುದರಿಂದ ಪಾದಾಚಾರಿಗಳಿಗೆ ಓಡಾಡಲು ಕಷ್ಟವಾಗುತ್ತಿದೆ. ಈ ಬಗ್ಗೆಯೂ ಕ್ರಮಕೈಗೊಳ್ಳಬೇಕೆಂದು ಸಭೆಯಲ್ಲಿ ಸದಸ್ಯರೆಲ್ಲರು ಆಗ್ರಹಿಸಿದರು. ಫುಟ್‍ಪಾತ್ ಮೇಲೆ ಅಂಗಡಿ ಸಾಮಾಗ್ರಿಗಳನ್ನು ಇಡದಂತೆ ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡಲಾಗುವುದು. ಮತ್ತೆಯೂ ಪುನರಾವರ್ತನೆಯಾದಲ್ಲಿ ಅಂತಹ ಸೊತ್ತುಗಳನ್ನು ಮುಟ್ಟಗೋಲು ಹಾಕಲಾಗುವುದು ಎಂದು ಇಂಜಿನಿಯರ್ ಪದ್ಮನಾಭ ಉತ್ತರಿಸಿದರು.

ಪುರಸಭಾ ವ್ಯಾಪ್ತಿಯಲ್ಲಿರುವ ಗೂಡಂಗಡಿಗಳು ಹಾಗೂ ಡಾಬಾಗಳಲ್ಲಿ ತಯಾರಾಗುವ ಆಹಾರಗಳು ಸುರಕ್ಷಿತವಾಗಿರುವುದರ ಬಗ್ಗೆ ಸಂಶಯವಿದೆ. ಇದನ್ನು ಪರಿಶೀಲನೆ ನಡೆಸುವುದು ಅಗತ್ಯ ಎಂದು ಪುರಸಭಾ ಸದಸ್ಯರು ಒತ್ತಾಯಿಸಿದರು. ಪುರಸಭೆಯಲ್ಲಿ ಆರೋಗ್ಯಾಧಿಕಾರಿ ಹುದ್ದೆ ಖಾಲಿಯಿದೆ. ಆದರೂ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು. ಬಗ್ಗೆ ಪೊಲೀಸರ ಸಹಕಾರದೊಂದಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕಂದಾಯ ನಿರೀಕ್ಷಕ ಅಶೋಕ್ ಅವರಿಗೆ ಸೂಚಿಸಿದರು. ತಾವು ತೆರವುಗೊಳಿಸಲು ಹೋದಾಗ ಪುರಸಭೆಯ ಸದಸ್ಯರು ಯಾರೂ ಅಂಗಡಿಯವರ ಪರವಾಗಿ ಮಾತನಾಡಬಾರದೆಂದು ಆರೋಗ್ಯ ನಿರೀಕ್ಷಕ ಅವರು ಹೇಳಿದರು.

ಪೇಟೆಯಲ್ಲಿರುವ ಖಾಸಗಿ ಸ್ಥಳಗಳು ನಿರ್ವಹಣೆಯಿಲ್ಲದೆ ಹುಲ್ಲು ಬೆಳೆಯುತ್ತದೆ. ಇಲ್ಲಿ ಹಾವುಗಳು ಓಡಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸ್ಥಳಗಳ ನಿರ್ವಹಣೆ ಮಾಡುವಂತೆ ಸಂಬಂಪಟ್ಟವರಿಗೆ ಪುರಸಭೆ ನಿರ್ದೇಶನ ನೀಡಬೇಕು ಎಂದು ಸದಸ್ಯ ಪಿ.ಕೆ ಥೋಮಸ್ ಸಲಹೆ ನೀಡಿದರು. ಪುರಸಭೆ ವ್ಯಾಪ್ತಿಯ ಪೇಪರ್‍ಮಿಲ್, ಅಲಂಗಾರು ಹಾಗೂ ವಿದ್ಯಾಗಿರಿ ಬಳಿ ಇರುವ ಸ್ವಾಗತಗೋಪುರಗಳು ಬಣ್ಣ ಕಳೆದುಕೊಂಡಿದೆ. ಅದರಲ್ಲಿರುವ ಮಾಹಿತಿಗಳನ್ನು ಸರಿಪಡಿಸಬೇಕು. ಪುರಸಭಾ ವ್ಯಾಪ್ತಿಯಲ್ಲಿರುವ ಬೀದಿ ದೀಪಗಳಿಗೆ ನಂಬರ್ ಹಾಕುವಂತೆ ಸದಸ್ಯೆ ಶ್ವೇತಾ ಪ್ರವೀಣ್ ಒತ್ತಾಯಿಸಿದರು.ಸದಸ್ಯರಾದ ರೂಪಾ ಸಂತೋಷ್, ಕೊರಗಪ್ಪ, ಶಕುಂತಳಾ, ಜಯಶ್ರೀ, ಪುರಂದರ ದೇವಾಡಿಗ ಚರ್ಚೆಯಲ್ಲಿ ಪಾಲ್ಗೊಂಡರು.ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.