ನಮ್ಮ ಬಡತನವನ್ನು, ಅಸಹಾಯಕತೆಯನ್ನು ಅವಹೇಳನ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ- ಮುನೀರ್ ಕಾಟಿಪಳ್ಳ

ಭಾರತ ದೇಶದ ಜನರನ್ನು ಕಾಡುವ ಹಲವು ಗಂಭೀರ ಸಮಸ್ಯೆಗಳನ್ನು ಈಡೇರಿಸುವ ಭರವಸೆಯನ್ನು ಮುಂದಿಟ್ಟು ಅಧಿಕಾರದ ಗದ್ದುಗೆಯನ್ನೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಾವೊಂದು ಭರವಸೆಗಳನ್ನು ಈಡೇರಿಸದೆ ಕನಿಷ್ಟ ನೆಮ್ಮದಿಯಿಂದ ಬದುಕು ನಡೆಸಲಾಗದಂತಹ ಸ್ಥಿತಿಗೆ ಈ ದೇಶದ ಜನರನ್ನು ತಂದು ನಿಲ್ಲಿಸಿದ್ದಾರೆ. ಇವತ್ತು ನಮ್ಮ ಬಡತನವನ್ನು, ಅಸಹಾಯಕತೆಯನ್ನು ಅವಹೇಳನ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾಂ ಮುನೀರ್ ಕಾಟಿಪಳ್ಳ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕೇಂದ್ರ, ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ವಿಪರೀತ ಬೆಲೆಏರಿಕೆ, ನಿರುದ್ಯೋಗ, ಹಣದುಬ್ಬರ, ದೇಶದ ಸಂಪತ್ತಿನ ಲೂಟಿ ಮತ್ತು ಭ್ರಷ್ಟಾಚಾರ ವಿರೋಧಿಸಿ ಸಿಪಿಐಎಂ ರಾಜ್ಯವ್ಯಾಪಿ ಕರೆ ನೀಡಿದ ರಾಜಕೀಯ ಪ್ರಚಾರಾಂದೋಲನದ ಭಾಗವಾಗಿ ಇಂದು (23-09-2022) ನಗರದ ಮಿನಿವಿಧಾನ ಸೌಧದ ಮುಂಭಾಗ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಏರಿಕೆ ಕಂಡಿದೆ ಆದರೆ ವರುಷಕ್ಕೆರಡು ಕೋಟಿ ಉದ್ಯೋಗ ನೀಡುವ ಭರವಸೆ ಈಡೇರಲೇ ಇಲ್ಲ, ನೋಟ್ ಬ್ಯಾನ್ ಮಾಡಿ ವಿದೇಶದಿಂದ ಕಪ್ಪು ಹಣವನ್ನಾಗಲಿ, ಭಯೋತ್ಪಾದನೆಯನ್ನಾಗಲಿ ನಿಗ್ರಹಿಸಲು ಸಾದ್ಯವಾಗಿಲ್ಲ ಬದಲಾಗಿ ಸಾವಿರಾರು ಕೋಟಿ ಆದಾಯ ತರುವ ಲಾಭದಾಯಕ ಸಾರ್ವಜನಿಕ ರಂಗದ ಉದ್ದಿಮೆಗಳನ್ನು, ಬ್ಯಾಂಕ್, ವಿಮಾ, ರೈಲ್ವೇ, ವಿಮಾನ ನಿಲ್ದಾಣಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ವಹಿಸಿಕೊಡಲಾಗಿದೆ. ಕೈಗಾರಿಕೆಗಳು ಬಾಗಿಲು ಮುಚ್ಚಿತ್ತು. ವ್ಯಾಪಾರ, ವಹಿವಾಟು, ಉದ್ಯೋಗ ಇಲ್ಲದೆ ಕಂಗಾಲಾದ ಜನ ಆತ್ಮಹತ್ಯೆ ಮಾಡುವಂತಹ ಸ್ಥಿತಿಗೆ ತಲುಪಿದರು. ದೇಶದ ಆರ್ಥಿಕ ಸ್ಥಿತಿ ಈ ಹಂತಕ್ಕೆ ತಲುಪಲು ಬಿಜೆಪಿ ಸರಕಾರದ ಆರ್ಥಿಕ ನೀತಿಗಳೇ ಕಾರಣ. ದೇಶದ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿ ದೇಶದ ನಂಬರ್ ವನ್ ಶ್ರೀಮಂತನಾಗಲು ಸಾಧ್ಯವಾದದ್ದು ದೇಶದ ಪ್ರಧಾನಿ ನರೇಂದ್ರ ಮೋದಿಯ ಕಾಲಘಟ್ಟದಲ್ಲಿ. ಕಳೆದ ಒಂದು ವರುಷದಲ್ಲಿ ಗೌತಮ್ ಅದಾನಿ ಆದಾಯ 6ಲಕ್ಷ ಕೋಟಿ ಹೆಚ್ಚಾಗಿದೆ. ಇನ್ನು ಕರ್ನಾಟಕದ ರಾಜ್ಯದ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ವ್ಯಾಪಕಗೊಂಡಿದ್ದು ಗುತ್ತಿಗೆಯಾಧಾರದ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ಪಡೆಯುವ ಹಂತಕ್ಕೆ ಬಂದು ತಲುಪಿದೆ. ಸಚಿವ ಈಶ್ವರಪ್ಪ ಹೆಸರೇಳಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿದ ಪ್ರಕರಣ ರಾಜ್ಯದ ಗಮನ ಸೆಳೆದಿದೆ. ಇನ್ನು 13800 ರಷ್ಟು ಸರಕಾರಿ ಶಾಲೆ ಬಾಗಿಲು ಮುಚ್ಚುವ ಸ್ಥಿತಿಗೆ ಮುಂದಾಗಿದೆ. ಅತಿಥಿ ಶಿಕ್ಷಕರಿಗೆ ಸರಿಯಾದ ವೇತನ ನೀಡದೆ , ಕನಿಷ್ಠ ಕೆಲಸವನ್ನು ಖಾಯಂ ಗೊಳಿಸದೆ ಸತಾಯಿಸಲಾಗುತ್ತಿದೆ. ಒಟ್ಟು ದೇಶದ ಜನರ ಬದುಕು ಬವಣೆಗಳನ್ನು ಸರಿಪಡಿಸುವ ಬದಲು ಧರ್ಮದ ಆಧಾರದಲ್ಲಿ ವಿಭಜಿಸುವ , ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಹಿಂಸೆಗೆ ಪ್ರಚೋದಿಸಿ ಜನರ ಗಮನದ ದಿಕ್ಕನ್ನು ಬದಲಾಯಿಸುವ ಮೂಲಕ ಕೋಮು ರಾಜಕಾರಣ ನಡೆಸಲಾಗುತ್ತಿದೆ. ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳನ್ನು ಬಯಲುಗೊಳಿಸಲು, ಅವರ ಕೋಮು ರಾಜಕಾರಣದ ಕುತಂತ್ರವನ್ನು ವಿಫಲಗೊಳಿಸಲು ಸಿಪಿಐಎಂ ಪಕ್ಷ ನಡೆಸುವ ರಾಜಕೀಯ ಪ್ರಚಾರಾಂದೋಲನವನ್ನು ಈ ರಾಜ್ಯದ ಜನ ಗಮನಿಸಬೇಕು ಹಾಗೂ ಬೆಂಬಲಿಸಬೇಕು ಎಂದರು.

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಸಿಪಿಐಎಂ ನಗರ ಸಮಿತಿ ಸದಸ್ಯರಾದ ಲೋಕೇಶ್ ಎಂ, ಸುರೇಶ್ ಬಜಾಲ್, ಪ್ರದೀಪ್, ಭಾರತೀ ಬೋಳಾರ ,ದಿನೇಶ್ ಶೆಟ್ಟಿ, ಕಾರ್ಮಿಕ ಮುಖಂಡರಾದ ಮುಸ್ತಫಾ ಕಲ್ಲಕಟ್ಟೆ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ.ಕೆ ಇಮ್ತಿಯಾಜ್ ಮುಂತಾದವರು ಉಪಸ್ಥಿತರಿದ್ದರು.ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಅಧ್ಯಕ್ಷತೆ ವಹಿಸಿ, ಸಿಪಿಐಎಂ ನಗರ ಸಮಿತಿ ಮುಖಂಡರಾದ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿ, ಜಯಂತಿ ಬಿ ಶೆಟ್ಟಿ ವಂದಿಸಿದರು.

Related Posts

Leave a Reply

Your email address will not be published.