ಮೈಸೂರು ದಸರಾ ಆನೆ ಗೋಪಾಲಸ್ವಾಮಿ ಇನ್ನಿಲ್ಲ

ದಸರಾದ ಆನೆಗಳಲ್ಲಿ ಒಂದಾದ 39 ವರ್ಷದ ಗೋಪಾಲಸ್ವಾಮಿ ಬುಧವಾರ ಕೊನೆಯುಸಿರು ಎಳೆದಿದೆ.ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಗೋಪಾಲಸ್ವಾಮಿ ಆನೆ ಮಂಗಳವಾರ ಕಾಡಿಗೆ ಮೇಯಲು ಹೋಗಿದ್ದಾಗ ಕಾಡಾನೆಗಳ ದಾಳಿಗೆ ಸಿಲುಕಿತ್ತು.
40ರ ಆಸುಪಾಸು ವಯಸ್ಸಿನ ಆಕರ್ಷಕ ಮೈಕಟ್ಟು ಹೊಂದಿದ್ದ ಗೋಪಾಲಸ್ವಾಮಿ ಅಪಾರ ಅಭಿಮಾನಿಗಳನ್ನು ಹೊಂದಿತ್ತು. ದಸರಾ ಗಜಪಡೆಯಲ್ಲಿ ಅತಿ ಎತ್ತರವಾದ ಹಾಗೂ 5400 ಕೆ.ಜಿ. ತೂಕ ಹೊಂದಿದ್ದ ಗೋಪಾಲಸ್ವಾಮಿ ಆನೆಯು ಅಭಿಮನ್ಯುವಿನ ನಂತರ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿತ್ತು. 2012ರಿಂದ ಪ್ರತಿ ವರ್ಷ ದಸರಾ ಮೆರವಣಿಗೆಯಲ್ಲಿ ಸತತ ಭಾಗವಹಿಸುತ್ತಿದ್ದ ಗೋಪಾಲಸ್ವಾಮಿಯು ನಿಶಾನೆ, ನೌಪತ್ ಆನೆ, ಸಾಲಾನೆ ಹಾಗೂ ಪಟ್ಟದ ಆನೆಯಾಗಿ ಹಲವಾರು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಎಲ್ಲರ ಪ್ರೀತಿ ಗಳಿಸಿತ್ತು. ದಸರಾ ಪಡೆಯಲ್ಲೇ ಎತ್ತರದ ಮೈಕಟ್ಟು ಹೊಂದಿದ್ದ ಗೋಪಾಲಸ್ವಾಮಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಗೋಪಾಲಸ್ವಾಮಿ ಆನೆಗೆ ಭಗವಂತ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂದೇಶ ನೀಡಿದ್ದಾರೆ.