ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನ: ಆಟಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ತೀರ್ಥ ಸ್ನಾನ

ಪುರಾಣ ಪ್ರಸಿದ್ದ ಪರ್ವತ ಕ್ಷೇತ್ರ ಬಂಟ್ವಾಳ ತಾಲೂಕಿನ ನರಹರಿ ಪರ್ವತದ ಮೇಲಿರುವ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಯ ಪ್ರಯುಕ್ತ ವಿಶೇಷ ತೀರ್ಥ ಸ್ನಾನ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿ ದೇವಸ್ಥಾನದ ತೀರ್ಥ ಬಾವಿಗಳಾದ ಶಂಖ, ಚಕ್ರ, ಗಧಾ, ಪದ್ಮ ಕೆರೆಗಳಿಗೆ ವೀಳ್ಯ ಅಡಿಕೆಯ ಭಾಗಿನ ಬಿಟ್ಟು ತೀರ್ಥ ನೀರು ಮಿಂದು ಪುನೀತರಾದರು.

ದೇವರ ದರ್ಶನ ಪಡೆದು ವಿಶೇಷ ಸೇವೆಗಳನ್ನು ಸಲ್ಲಿಸಿದರು. ಮಹಾಭಾರತ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ಅಜ್ಞಾತವಾಸ ಕೈಗೊಂಡ ಸಂದರ್ಭದಲ್ಲಿ ನರಹರಿ ಬೆಟ್ಟಕ್ಕೆ ಶ್ರೀ ಹರಿಯ ಜೊತೆ ಭೇಟಿ ನೀಡಿದ ಕಾರಣಕ್ಕೆ ಈ ಪರ್ವತಕ್ಕೆ ನರಹರಿ ಬೆಟ್ಟವೆಂದು ಹೆಸರು ಬಂದಿದೆ. ಶ್ರೀ ಕೃಷ್ಣನು ತನ್ನ ಕೈಯಲಿದ್ದ ಆಯುಧಗಳಾದ ಶಂಖ, ಚಕ್ತ, ಗಧಾ, ಪದ್ಮಗಳಿಂದ ಇಲ್ಲಿನ ತೀರ್ಥ ಕೆರೆಗಳನ್ನು ರಚಿಸಿ ಈ ನೀರಿನ ಮೂಲಕ ತಾವು ಪ್ರತಿಷ್ಠಾಪಿಸಿದ ಶ್ರೀ ಸದಾಶಿವ ದೇವರಿಗೆ ಅಭಿಷೇಕ ಮಾಡಿದರೆಂದು ಪ್ರತೀತಿ ಇದೆ. ಆಟಿ ಅಮಾವಸ್ಯೆಯ ದಿನದಂದು ತೀರ್ಥ ಸ್ನಾನ ಮಾಡುವುದರಿಂದ ಪುಣ್ಯ ಸಂಪಾದನೆಯೊಂದಿಗೆ ಚರ್ಮಾದಿ ರೋಗಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿಂದ ಆ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ತೀರ್ಥ ಸ್ನಾನ ಮಾಡಿದರು.

ಈ ಸಂದರ್ಭ ದೇವಸ್ಥಾನದ ಆಡಳಿತ ಮೋಕ್ತೇಸರ ಡಾ. ಪ್ರಶಾಂತ್ ಮಾರ್ಲ ಮಾತನಾಡಿ ನರಹರಿ ಕ್ಷೇತ್ರ ಅತ್ಯಂತ ಪುರಾತನ ಕ್ಷೇತ್ರವಾಗಿದ್ದು ಆಟಿ ಅಮಾವಾಸ್ಯೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ತೀರ್ಥಸ್ನಾನ ಮಾಡುತ್ತಾರೆ ಎಂದು ತಿಳಿಸಿದರು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಒಟ್ಟು 6 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸ ಮುಂದಿನ ವರ್ಷಕ್ಕೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ,ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು
