ಆಗ್ನೇಯ ಏಶಿಯಾ, ಆಸ್ಟ್ರೇಲೇಶಿಯಾ ಮೂಲದ ನೋಣಿ ಹಣ್ಣು ನೂರಕ್ಕೂ ಹೆಚ್ಚು ಹೆಸರುಗಳನ್ನು ಹೊಂದಿದೆ.

ದ್ವೀಪಗಳಲ್ಲಿ, ಕಡಲ ಕಿನಾರೆಗಳಲ್ಲಿ ಉಪ್ಪು ನೀರು ಸಹ್ಯ ಈ ಮರದ ಹಣ್ಣಿಗೆ ಪ್ರತಿ ದ್ವೀಪದಲ್ಲೂ ಪ್ರತ್ಯೇಕ ಹೆಸರು ಇದೆ. ಹಾಗಾಗಿ ಮೊರಿಂಡಾ ಸಿಟ್ರಿಫೋಲಿಯಾವು ನೂರಕ್ಕೂ ಹೆಚ್ಚು ಹೆಸರುಗಳನ್ನು ಹೊಂದಿದೆ. ಬೀಚ್ ಮಲ್ಬೆರಿ ಹೆಚ್ಚು ಪ್ರಸಿದ್ಧವಾದುದು. ಕಟು ವಾಸನೆಯ ಈ ಹಣ್ಣನ್ನು ವೀವರ್ ಇರುವೆಗಳು, ಫ್ರುಟ್ ಬಾವಲಿಗಳು ಹೆಚ್ಚು ಆಶ್ರಯಿಸಿವೆ. ದ್ವೀಪವಾಸಿ ಬುಡಕಟ್ಟು ಜನರು ಹೆಚ್ಚಾಗಿ ಉಪ್ಪು ನೀರಿನಲ್ಲಿ ಬೇಯಿಸಿ, ನೀರು ಸೋಸಿ ಪಲ್ಯ ಮಾಡುವರು. ನೇರ ತಿನ್ನುವುದೂ ಇದೆ.

ಸಣ್ಣ ಗಾತ್ರದ ಈ ಮರದ ಹಣ್ಣು ಬರಗಾಲದ ಆಹಾರ ಎನಿಸಿದೆ. ಪೆಸಿಫಿಕ್ ದ್ವೀಪಗಳಿಗೆಲ್ಲ ಹಬ್ಬಿಕೊಂಡಿದೆ. ಕಾಂಬೋಡಿಯಾದವರು ಇದರ ಎಲೆಗಳನ್ನು ಮೀನು ಖಾದ್ಯಕ್ಕೆ ಸೇರಿಸುತ್ತಾರೆ. ಹಣ್ಣನ್ನು ಹೆಚ್ಚು ನೇರ ತಿನ್ನುವುದರಿಂದ ಕಾಲಾನಂತರ ಪಿತ್ತಕೋಶಕ್ಕೆ ಹಾನಿ ಎನ್ನಲಾಗಿದೆ. ಕಾಯಿ ಹಸಿರು, ನಸು ಹಳದಿಯಾಗಿ ಮಾಗಿದಾಗ ಬಿಳಿಬೂದು ಬಣ್ಣದ್ದಾಗಿದೆ.

ಇದರ ಹಣ್ಣು ನಿಜವಾಗಿ ಹಣ್ಣುಗಳ ಕೂಡುಕಟ್ಟು ಆಗಿದೆ. ಇತ್ತೀಚೆಗೆ ಯಾವುದೇ ವೈಜ್ಞಾನಿಕ ಪರೀಕ್ಷೆಯಿಲ್ಲದೆ ಇದರ ಎಲೆ, ಒಣಗಿಸಿದ ಹಣ್ಣಿನ ಪುಡಿ, ಹಣ್ಣಿನ ಜ್ಯೂಸ್, ರಸ, ಎಣ್ಣೆ, ಪಾನೀಯಗಳನ್ನು ಔಷಧಿ ಎಂದು ಮಾರುತ್ತಾರೆ. ಬುಡಕಟ್ಟು ಜನರು ಇದನ್ನು ಔಷಧಿಯಾಗಿ ಬಳಸುತ್ತಿದ್ದುದು ಮಾತ್ರ ಸತ್ಯ.

