ಪ್ರಾಜೆಕ್ಟ್ ಚೀತಾ ತಂಡದಲ್ಲಿ ಪುತ್ತೂರಿನ ಕುವರ ಸನತ್ ಕೃಷ್ಣ
ಪುತ್ತೂರು :ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದಂದೇ ಆಫ್ರಿಕಾದ ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾದ ಎಂಟು ಚೀತಾಗಳ ಐತಿಹಾಸಿಕ ಪಯಣದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ವನ್ಯಜೀವಿ ತಜ್ಞ ಸನತ್ ಕೃಷ್ಣ ಮುಳಿಯ ಪ್ರಮುಖ ಪಾತ್ರ ವಹಿಸಿದ್ದಾರೆ.
ಸ್ವತ: ಪ್ರಧಾನಿ ಮೋದಿ ಅವರಿಂದ ಶಹಬ್ಬಾಸ್ ಪಡೆದ ಪ್ರಾಜೆಕ್ಟ್ ಚೀತಾ ತಂಡದಲ್ಲಿದ್ದ ಸನತ್ ಕೃಷ್ಣ ಮುಳಿಯ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.
ಕೇಂದ್ರ ಪರಿಸರ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಶನಲ್ ಜಿಯಾಲಜಿಕಲ್ ಪಾಕ್೯ನಲ್ಲಿ ಡೆಪ್ಯುಟಿ ಸೆಕ್ರೆಟರಿ ಆಗಿ ಕಳೆದ ಆರು ತಿಂಗಳಿಂದ ಕೆಲಸ ಮಾಡುತ್ತಿರುವ ಸನತ್ ಕೃಷ್ಣ ಅವರು ತಮ್ಮ ಗಣನೀಯ ಸಾಧನೆಯಿಂದಾಗಿ ಪ್ರಾಜೆಕ್ಟ್ ಚೀತಾ ತಂಡಕ್ಕೆ ಆಯ್ಕೆಯಾಗಿದ್ದಾರೆ.
ವನ್ಯಜೀವಿ ಮತ್ತು ಅರಿವಳಿಕೆ ಕ್ಷೇತ್ರದಲ್ಲಿ ತಜ್ಞರಾಗಿರುವ ಇವರು, ವೈಲ್ಡ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದ್ದರು. ಆಫ್ರಿಕಾದ ಬೋಸ್೯ವಾನಾದಲ್ಲಿ ಒಂದೂವರೆ ವರ್ಷಗಳ ಕಾಲ ವನ್ಯಜೀವಿಗಳ ಬಗ್ಗೆ ಇವರು ಅಧ್ಯಯನ, ಸಂಶೋಧನೆ, ವ್ಯಾಸಂಗ ಮಾಡಿದ ಅನುಭವ ಇದೀಗ ಪ್ರಾಜೆಕ್ಟ್ ಚೀತಾಕ್ಕೆ ಆಯ್ಕೆಯಾಗಲು ಸಹಕಾರಿಯಾಗಿದೆ.
ದಿ. ಕೇಶವ ಭಟ್ ಮುಳಿಯ ಮತ್ತು ಉಷಾ ದಂಪತಿಯ ಪುತ್ರನಾದ ಸನತ್ ಕೃಷ್ಣ ಈಗಲೂ ಪುತ್ತೂರಿನ ಕೊಂಬೆಟ್ಟುವಿನಲ್ಲಿ ತಾಯಿ ಜತೆ ವಾಸವಿದ್ದು, ಆಗಾಗ ದೆಹಲಿಯಿಂದ ಬಂದು ತಾಯಿ ಜತೆ ಸಮಯ ಕಳೆಯುತ್ತಾರೆ. ಡೆಹ್ರಾಡೂನ್ ಮೂಲದ ಪ್ರಿಯಾಂಕಾ ಎಂಬ ವನ್ಯಜೀವಿ ತಜ್ಞೆಯನ್ನು ಮದುವೆಯಾಗಿದ್ದಾರೆ.
ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಮತ್ತು ಪಿಯುಸಿ ಕಲಿತ ಸನತ್ ಕೃಷ್ಣ ಮುಳಿಯ ಅವರಿಗೆ ಬಾಲ್ಯದಿಂದಲೇ ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ಮುಳಿಯ ಮನೆತನ ಚಿನ್ನಾಭರಣ ಉದ್ಯಮದಲ್ಲಿ ಪ್ರಸಿದ್ಧರಾಗಿದ್ದರೂ ಸನತ್ ಮಾತ್ರ ಪ್ರಾಣಿಲೋಕದ ಕಡೆಗೆ ಆಸಕ್ತರಾಗಿ ಬೆಂಗಳೂರಿನ ಹೆಬ್ಬಾಳದಲ್ಲಿ ಪಶು ವೈದ್ಯಕೀಯ ಕಲಿತರು. ಅವರ ಆಸಕ್ತಿ, ಪರಿಶ್ರಮ ಇವತ್ತು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದೆ ಎನ್ನುತ್ತಾರೆ ಸಂಬಂಧಿಕರಾದ ಕೇಶವ ಪ್ರಸಾದ್ ಮುಳಿಯ.
ಆರು ತಿಂಗಳು ಬನ್ನೇರುಘಟ್ಟದಲ್ಲಿ ಕೆಲಸ ಮಾಡಿದ್ದ ಸನತ್, ಎಚ್ ಡಿ ಕೋಟೆಯೂ ಸೇರಿದಂತೆ ನಾಡಿನ ನಾನಾ ಕಡೆ ಹುಲಿ ಮತ್ತಿತರ ವನ್ಯಜೀವಿಗಳ ದಾಳಿ ಸಂದರ್ಭದಲ್ಲಿ ಅರಿವಳಿಕೆ ತಜ್ಞರಾಗಿ ತುರ್ತು ಸೇವೆ ಸಲ್ಲಿಸಿದ್ದರು. ಅಮೆರಿಕಾದಲ್ಲೂ ಒಂದಷ್ಟು ಸಮಯ ವನ್ಯಜೀವಿ ಅಧ್ಯಯನ, ಸೇವೆ ಸಲ್ಲಿಸಿದ್ದಾರೆ
ಸನತ್ ಕೃಷ್ಣ ಪರಿಣತಿ ಗಮನಿಸಿ ದೆಹಲಿಯ ನ್ಯಾಶನಲ್ ಜಿಯಾಲಜಿಕಲ್ ಪಾಕ್೯ನಲ್ಲಿ ಉದ್ಯೋಗ ನೀಡಲಾಗಿತ್ತು. ಪ್ರಸ್ತುತ ಆಫ್ರಿಕಾದಿಂದ ಎಂಟು ಚೀತಾಗಳನ್ನು ತರುವ ಸಂದರ್ಭ ಅರಿವಳಿಕೆ ತಜ್ಞರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ.