ಪುತ್ತೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಖಚಿತ – ಪ್ರತಾಪ ಸಿಂಹ ನಾಯಕ್ ವಿಶ್ವಾಸ

ಪುತ್ತೂರು: ರಾಜ್ಯ ವಿಧಾನ ಪರಿಷತ್‌ನ ಆರು ಸ್ಥಾನಗಳಿಗೆ ಜೂನ್ 3ರಂದು ನಡೆಯುವ ಚುನಾವಣೆಯಲ್ಲಿ ಎಲ್ಲ ಆರು ಸ್ಥಾನಗಳಲ್ಲೂ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಗೆಲುವು ಸಾಧಿಸಲಿದೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬಂಡಾಯವಿದ್ದರೂ, ಬಿಜೆಪಿಯಂಥ ರಾಷ್ಟ್ರೀಯ ಪಕ್ಷದ ಸಂಘಟನಾ ಸಾಮರ್ಥ್ಯದ ಎದುರು ಬಂಡಾಯ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ ಎಂದು ಹಿರಿಯ ಬಿಜೆಪಿ ಮುಖಂಡರೂ, ವಿಧಾನ ಪರಿಷತ್ ಸದಸ್ಯರೂ ಆದ ಪ್ರತಾಪ ಸಿಂಹ ನಾಯಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಇವತ್ತು ಇಡೀ ದೇಶದಲ್ಲಿ ಗೆಲ್ಲುವ ಪಾರ್ಟಿಯಾಗಿದೆ. ಅವಕಾಶಗಳು ಈ ಪಕ್ಷದಲ್ಲಿ ಹೆಚ್ಚಿವೆ. ಹೀಗಾಗಿ ಸಹಜವಾಗಿ ಬಂಡಾಯದ ಲಕ್ಷಣ ಅಲ್ಲೊಂದು ಇಲ್ಲೊಂದು ಕಾಣಿಸಿಕೊಳ್ಳುತ್ತದೆ. ಇದನ್ನೆಲ್ಲ ಪಕ್ಷ ಸಮರ್ಥವಾಗಿ ನಿಭಾಯಿಸಲಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂದು ಭಾವಿಸಿದವರು ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರು. ಹಾಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರ ಮತದಾರರು ಪಕ್ಷದ ಚಿಹ್ನೆಗಾಗಿ ಮತ ಚಲಾಯಿಸುತ್ತಾರೆಯೇ ಹೊರತು ವ್ಯಕ್ತಿ ನೋಡಿ ಮತ ಚಲಾಯಿಸುವುದಿಲ್ಲ. ಬಂಡಾಯ ಅಭ್ಯರ್ಥಿ ಇದ್ದರೂ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಶಿವಮೊಗ್ಗದ ಡಾ. ಧನಂಜಯ ಸರ್ಜಿ ಅವರು ಗೆಲುವು ಸಾಧಿಸಲಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರೂ, ಹಾಲಿ ವಿಧಾನ ಪರಿಷತ್ ಸದಸ್ಯರೂ ಆದ ಭೋಜೇಗೌಡ ನಮ್ಮ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದು, ಅವರು ಕೂಡ ಗೆಲುವು ಸಾಧಿಸಲಿದ್ದಾರೆ ಎಂದವರು ನುಡಿದರು.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಶಿಕ್ಷಕರು ಮತ್ತು ಪದವೀಧರರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿತ್ತು. ಇದರ ಆಧಾರದಲ್ಲಿ ನಾವು ಮತ ಕೇಳುತ್ತಿದ್ದೇವೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19971 ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಏಳೂವರೆ ಸಾವಿರ ಮತದಾರರಿದ್ದಾರೆ. ಎಲ್ಲ ಮತದಾರರನ್ನು ಬೂತ್‌ವಾರು ವಿಂಗಡಿಸಲಾಗಿದೆ. ಒಬ್ಬ ಪ್ರಮುಖನಿಗೆ 25 ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಗುರಿ ನೀಡಲಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಪ್ರಚಾರ ಕಾರ್ಯ ನಡೆಯುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವಾ, ನಗರ ಮಂಡಲ ಅಧ್ಯಕ್ಷರಾದ ಪಿ.ಜಿ. ಜಗನ್ನಿವಾಸ ರಾವ್, ಪಕ್ಷದ ಮುಖಂಡರಾದ ವಿಕಾಸ್ ಪುತ್ತೂರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.