ಪುತ್ತೂರು : ಕೋಟಿ ಚೆನ್ನಯ ಕಂಬಳ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಇತಿಹಾಸ ಪ್ರಸಿದ್ಧವಾಗಿರುವ ಪುತ್ತೂರಿನ 32ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಮಾ.1ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು, ಕಂಬಳವನ್ನು ಉತ್ತಮವಾಗಿ ನಡೆಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಹೇಳಿದರು.
ಅವರು ಶನಿವಾರ ಪುತ್ತೂರು ದೇವಳದ ವಠಾರದಲ್ಲಿ ಕಂಬಳದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದೇವಳದ ಅಭಿವೃದ್ಧಿಗೆ ತೊಡಕು ನಿವಾರಣೆ ಪುತ್ತೂರು ದೇವಳದ ಅಭಿವೃದ್ಧಿಗೆ ಕಂಬಳ ಸಮಿತಿಯ ಪೂರ್ಣ ಬೆಂಬಲ ಇದೆ. ಇದಕ್ಕೆ ತೊಡಕು ಉಂಟು ಮಾಡುವ ಪ್ರಯತ್ನ ಮಾಡಿರುವುದು ತುಂಬಾ ಬೇಸರವಾಗಿದೆ. ರಾಜೇಶ್ ಬನ್ನೂರು ಪುತ್ತೂರು ದೇವಳಕ್ಕೆ ಬೇಕಾದ ವ್ಯಕ್ತಿ. ಇಲ್ಲಿ ಅವರೇ ಮುಂದೆ ನಿಂತು ದೇವಳದ ಅಭಿವೃದ್ಧಿಯ ಜತೆಗೆ ಕೈ ಜೋಡಿಸಬೇಕಿತ್ತು. ಆದರೆ ಅವರು ಅಭಿವೃದ್ಧಿಗೆ ತಡೆ ಒಡ್ಡುವ ಪ್ರಯತ್ನ ಮಾಡಿರುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ದೇವಳದ ಅಭಿವೃದ್ಧಿಗೆ ಯಾವುದೇ ತೊಂದರೆ ಆಗದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ವಿರುದ್ಧ ದೂರು ದಾಖಲಿಸದಂತೆ ಪುತ್ತೂರು ನಗರಠಾಣೆಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ದೇವಳ ಅಭಿವೃದ್ಧಿ ಹಿನ್ನಲೆಯಲ್ಲಿ ದೇವಳದ ಆಡಳಿತ ಸಮಿತಿ ಹಾಗೂ ಭಕ್ತಾಧಿಗಳ ಕರಸೇವೆ ಫೆ.11ರಂದು ನಡೆಯಲಿದ್ದು, ಈ ಕಾರ್ಯದಲ್ಲಿ ಕೋಟಿಚೆನ್ನಯ ಜೋಡುಕಕರೆ ಸಮಿತಿಯ ಎಲ್ಲಾ ಸದಸ್ಯರೂ ಭಾಗಿಯಾಗುವಂತೆ ಚಂದ್ರಹಾಸ ಶೆಟ್ಟಿ ಅವರು ವಿನಂತಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಂಚಾಲಕ ವಸಂತ ಕುಮಾರ್ ರೈ ದುಗ್ಗಳ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್ ಪಿ.ವಿ, ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉದ್ಯಮಿ ಶಿವರಾಮ ಆಳ್ವ, ಶಶಿಕಿರಣ್ ರೈ ನೂಜಿಬೈಲು, ದೇವಳ ಸಮಿತಿಯ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ನಿರಂಜನ ರೈ ಮಠಂತಬೆಟ್ಟು, ಸುದೇಶ್ ನಾೈಕ್, ರಮೇಶ್ ರೈ ಮೊಟ್ಟೆತ್ತಡ್ಕ, ವಿಕ್ರಂ ಶೆಟ್ಟಿ , ಮಾಣಿಗುತ್ತು ನಾಗರಾಜ ಶೆಟ್ಟಿ, ಪ್ರವೀಣ್ ಕುಮಾರ್, ರೋಶನ್ ರೈ, ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.
