ಬಸ್ ನಲ್ಲಿ ಅಧಿಕಾರಿಯ ಪರ್ಸ್ ಕದ್ದ ಮಹಿಳೆಯ ಬಂಧನ
ಪುತ್ತೂರು : ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರು ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸುಕನ್ಯಾ ಅವರ ರೂ. 8 ಸಾವಿರ ನಗದು ಹಣವಿದ್ದ ಪರ್ಸನ್ನು ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕೆಯೊಬ್ಬಳು ಕಳವು ಮಾಡಿದ ಘಟನೆ ಮಂಗಳವಾರ ನಡೆದಿದ್ದು, ಕಳವು ಮಾಡಿರುವ ತಮಿಳುನಾಡು ಮೂಲದ ಕಳ್ಳಿಯನ್ನು ಪುತ್ತೂರು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.ತಮಿಳುನಾಡು ರಾಜ್ಯದ ಸೇಲಂ ನಿವಾಸಿ ಸೆಲ್ವಂ ಎಂಬರ ಪತ್ನಿ ನಲ್ಲಮ್ಮ (50)ಪರ್ಸ್ ಎಗಿಸಿದ ಕಳ್ಳಿ.
ಪುತ್ತೂರು ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿಯಾಗಿರುವ ಸುಕನ್ಯಾ ಅವರು ಪ್ರತಿದಿನ ಮಂಗಳೂರಿನಿಂದ ಪುತ್ತೂರಿಗೆ ಬಸ್ಸಿನಲ್ಲಿ ಬರುತ್ತಿದ್ದರು. ಎಂದಿನಂತೆ ಅವರು ಮಂಗಳವಾರ `ಮಹೇಶ್’ ಹೆಸರಿನ ಖಾಸಗಿ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಲ್ಲಡ್ಕದಲ್ಲಿ ಬಸ್ ಹತ್ತಿದ್ದ ಮಹಿಳೆಯೊಬ್ಬರು ಸುಕನ್ಯಾ ಅವರ ಪಕ್ಕದಲ್ಲಿ ಕುಳಿದ್ದರು. ಪುತ್ತೂರಿನ ಅಂಚೆ ಕಚೇರಿಯ ಬಳಿಯಿರುವ ಬಸ್ ಪ್ರಯಾಣಿಕರ ತಂಗುದಾಣದ ಬಳಿ ಬಸ್ಸಿನಿಂದ ಇಳಿದ ಸುಕನ್ಯಾ ಅವರು ತಾಲ್ಲೂಕು ಪಂಚಾಯಿತಿಗೆ ನಡೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಇರುವ ಮೆಡಿಕಲ್ ಅಂಗಡಿಯೊಂದಕ್ಕೆ ತೆರಳಿ ಔಷಧಿ ಖರೀದಿಸಿ, ಹಣ ನೀಡಲು ಬ್ಯಾಗಿನಲ್ಲಿದ್ದ ಪರ್ಸ್ ಹುಡುಕಾಡಿದಾಗ ಪರ್ಸ್ ನಾಪತ್ತೆಯಾಗಿತ್ತು. ಬ್ಯಾಗಿನ ಝಿಪ್ ಓಪನ್ ಮಾಡಿ ಪರ್ಸ್ ಕಳವು ಮಾಡಿರುವುದು ಅವರ ಅರಿವಿಗೆ ಬಂದಿತ್ತು.ಕೂಡಲೇ ಎಚ್ಚೆತ್ತುಕೊಂಡ ಸುಕನ್ಯಾ ಅವರು ಈ ಹಿಂದೆ ಬರುತ್ತಿದ್ದ ಬಸ್ಸಿನ ಚಾಲಕನನ್ನು ಮೊಬೈಲ್ ಕರೆಯ ಮೂಲಕ ಸಂಪರ್ಕಿಸಿದಾಗ ಮಹೇಶ್ ಬಸ್ಸಿನಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಇದೆ ಎಂಬ ವಿಚಾರ ತಿಳಿದು ಬಂದಿತ್ತು. ಬಳಿಕ ಅವರು ಪುತ್ತೂರು ಠಾಣೆಗೆ ತೆರಳಿ ದೂರು ನೀಡಿದ್ದರು. ಬಳಿಕ ಮಹೇಶ್ ಬಸ್ಸಿನ ಚಾಲಕ ರೋಶನ್ ಕ್ರಾಸ್ತಾ ಅವರು ಮಂಗಳೂರಿಗೆ ಹೋಗಿ ಬಸ್ಸಿನ ಮಾಲಕ ಪ್ರಕಾಶ್ ಶೆಟ್ಟಿ ಅವರಿಗೆ ಈ ಕುರಿತು ಮಾಹಿತಿ ನೀಡಿ, ಬಸ್ಸಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯ ವಿಡಿಯೋವನ್ನು ಠಾಣೆಗೆ ಕಳುಹಿಸಿಕೊಟ್ಟರು.ಬಸ್ಸಿನ ಸಿಸಿ ಕ್ಯಾಮರಾ ಸೆರೆ ಹಿಡಿದಿದ್ದ ದೃಶ್ಯಾವಳಿಯನ್ನು ಆಧರಿಸಿಕೊಂಡು ಆರೋಪಿ ಮಹಿಳೆಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ ಪುತ್ತೂರು ನಗರ ಪೊಲೀಸರು ಆಕೆಯನ್ನು ಬುಧವಾರ ಪತ್ತೆ ಮಾಡಿ ಬಂಧಿಸಿದ್ದಾರೆ.